ADVERTISEMENT

ಬಾದಾಮಿ| ₹1 ಕೋಟಿ ವೆಚ್ಚದಲ್ಲಿ ಮೂರ್ತಿಗಳ ತಯಾರಿ: ಪ್ರತಿಷ್ಠಾಪನೆಗೆ ನಿರಾಸಕ್ತಿ

ಎಸ್.ಎಂ.ಹಿರೇಮಠ
Published 24 ಸೆಪ್ಟೆಂಬರ್ 2024, 5:40 IST
Last Updated 24 ಸೆಪ್ಟೆಂಬರ್ 2024, 5:40 IST
ಬಾದಾಮಿ ಹೊರವಲಯದಲ್ಲಿ ಮಲಗಿದ ಇಮ್ಮಡಿ ಪುಲಿಕೇಶಿ ಮೂರ್ತಿ
ಬಾದಾಮಿ ಹೊರವಲಯದಲ್ಲಿ ಮಲಗಿದ ಇಮ್ಮಡಿ ಪುಲಿಕೇಶಿ ಮೂರ್ತಿ   

ಬಾದಾಮಿ: ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯಲ್ಲಿ ಇಮ್ಮಡಿ ಪುಲಿಕೇಶಿ ಮತ್ತು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯ ಮುಹೂರ್ತ ಇನ್ನೂ ಕೂಡಿಬಂದಿಲ್ಲ!

2015-16 ರಲ್ಲಿ ಕೇಂದ್ರ ಸರ್ಕಾರದ ‘ಹೃದಯ ಯೋಜನೆ’ಯಲ್ಲಿ ಅಂದಾಜು ₹1 ಕೋಟಿ ವೆಚ್ಚದಲ್ಲಿ ಇಮ್ಮಡಿ ಪುಲಿಕೇಶಿ ಮತ್ತು ಬಸವೇಶ್ವರ ಮೂರ್ತಿಯನ್ನು ಕಲಾವಿದರು ತಯಾರಿಸಿದ್ದಾರೆ.

ಮೂರ್ತಿಗಳನ್ನು ತಯಾರಿಸಿ, ಮೂರು ವರ್ಷಗಳಾದರೂ ಮಳೆ, ಬಿಸಿಲು ಮತ್ತು ಗಾಳಿಗೆ ಬಯಲಿನಲ್ಲಿಯೇ ಅವುಗಳನ್ನು ಇಡಲಾಗಿದೆ. 

ADVERTISEMENT

ಪಟ್ಟಣದ ಹೊರವಲಯದ ಮಿನಿ ವಿಧಾನ ಸೌಧ ರಸ್ತೆಯ ಪಕ್ಕದಲ್ಲಿ ಸಿಮೆಂಟ್ ಇಟ್ಟಂಗಿ ತಯಾರಿಸುವ ಖಾಸಗಿ ನಿವೇಶನದಲ್ಲಿ ಒಂದು ಕುಳಿತ ಪುಲಿಕೇಶಿ ಮೂರ್ತಿ. ಇನ್ನೊಂದು ಪುಲಿಕೇಶಿ ಮೂರ್ತಿ ಮಲಗಿಸಲಾಗಿದೆ. ಸುತ್ತ ಹುಲ್ಲು ಆವರಿಸಿದೆ. ಪಕ್ಕದಲ್ಲಿ ಬಸವೇಶ್ವರ ಮೂರ್ತಿಯನ್ನೂ ಕಾಣಬಹುದಾಗಿದೆ.

ಇಲ್ಲಿನ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಎಸ್.ಬಿ. ಮಮದಾಪೂರ ಪದವಿ ಕಾಲೇಜಿನ ಆವರಣದಲ್ಲಿ ಈಚೆಗೆ ಇಮ್ಮಡಿ ಪುಲಿಕೇಶಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಗರದ ಜನತೆ ಹಬ್ಬದಂತೆ ಸಂಭ್ರಮಿಸಿದರು. ಆದರೆ, ಇಲ್ಲಿನ ಶಿಲಾಮೂರ್ತಿಗಳ ಪ್ರತಿಷ್ಠಾಪನೆಗೆ ಏನು ತೊಂದರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇಲ್ಲಿನ ನಗರ ಅಭಿವೃದ್ಧಿ ಹೋರಾಟ ಸಮಿತಿ ಮತ್ತು ಮಂಡ್ಯದ ಕದಂಬ ಸೈನ್ಯ ಸಂಘಟನೆ ಅಧಿಕಾರಿಗಳಿಗೆ ಮತ್ತು ಈಚೆಗೆ ಕದಂಬ ಸೈನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರೂ ಮೂರ್ತಿ ಪ್ರತಿಷ್ಠಾಪನೆ ನನೆಗುದಿಗೆ ಬಿದ್ದಿದೆ.

99 ಸಾವಿರ ಹಳ್ಳಿಗಳ ದೊರೆ:

ಚಾಲುಕ್ಯದೊರೆ ಇಮ್ಮಡಿ ಪುಲಿಕೇಶಿ 99 ಸಾವಿರ ಹಳ್ಳಿಗಳಿಗೆ ದೊರೆಯಾಗಿದ್ದ. ಆದರೆ ಆತನ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳ ಸಿಗುತ್ತಿಲ್ಲ ಎಂದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ– ಸಮಾರಂಭಗಳಲ್ಲಿ ಚಾಲುಕ್ಯ ಸಾಮ್ರಾಜ್ಯ ಮತ್ತು 12ನೇ ಶತಮಾನದ ಸಮಾನತೆಯ ಹರಿಕಾರ ಬಸವಣ್ಣ ಸೇರಿದಂತೆ ಅನೇಕ ಶರಣರ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಪುಲಿಕೇಶಿ ಮತ್ತು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ.

‘ವೀರಪುಲಿಕೇಶಿ ವೃತ್ತದಲ್ಲಿ ಪ್ರತಿಷ್ಠಾಪಿಸಲು ಗುಂಡಿ ತೋಡಿ ಸಿಮೆಂಟ್ ಕಂಬ ನಿಲ್ಲಿಸಿ ಕೈಬಿಟ್ಟರು. ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಬಸವೇಶ್ವರ ವೃತ್ತದ ಮುಖ್ಯ ರಸ್ತೆಯ ಮಧ್ಯೆ ಗುಂಡಿ ತೋಡಿ ಮುಚ್ಚಿದರು. ಮೂರ್ತಿ ಪ್ರತಿಷ್ಠಾಪನೆಗೆ ಪುರಸಭೆಗೆ ಸ್ಥಳವೇ ದೊರಕದಂತಾಗಿದೆ ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಬೇಸರ ವ್ಯಕ್ತಪಡಿಸಿ, ಮೂರ್ತಿ ಪ್ರತಿಷ್ಠಾಪನೆಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಬಾದಾಮಿ ಹೊರವಲಯದಲ್ಲಿ ಕುಳಿತ ಇಮ್ಮಡಿ ಪುಲಿಕೇಶಿ ಮಲಗಿಸಿದ ಪುಲಿಕೇಶಿ ಮತ್ತು ಕುಳಿತ ಬಸವೇಶ್ವರ ಮೂರ್ತಿ
ಬಾದಾಮಿ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಎಸ್.ಬಿ. ಮಮದಾಪೂರ ಪದವಿ ಕಾಲೇಜಿನ ಎದುರಿಗೆ ಪ್ರತಿಷ್ಠಾಪನೆಯಾದ ಇಮ್ಮಡಿ ಪುಲಿಕೇಶಿ ಮೂರ್ತಿ
ಮಂಡ್ಯದ ಕದಂಬ ಸೈನ್ಯದಿಂದ ಮನವಿ ಮೂರ್ತಿಗಳ ಪ್ರತಿಷ್ಠಾಪನೆಗೆ ಆಗ್ರಹ
ಮೂರ್ತಿಗಳ ಪ್ರತಿಷ್ಠಾಪನೆಗೆ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಷ್ಠಾಪನೆ ಕುರಿತು ಸಂಬಂಧಿಸಿದವರ ಜೊತೆಗೆ ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು
ಭೀಮಸೇನ ಚಿಮ್ಮನಕಟ್ಟಿ ಶಾಸಕ
ಬಾಗಲಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಸಭೆ ಇದೆ. ಅಲ್ಲಿ ಶಾಸಕರು ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನಿಸಲಾಗುವುದು
ಪಾಂಡಪ್ಪ ಕಟ್ಟಿಮನಿ ಬಾದಾಮಿ ಪುರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.