ADVERTISEMENT

ಬಾಗಲಕೋಟೆ: ಅಬಕಾರಿ ಸಚಿವರ ಜಿಲ್ಲೆಯಲ್ಲೂ ಮದ್ಯದಂಗಡಿ ಬಂದ್‌ಗೆ ಸಿದ್ಧತೆ?

ಬಂದ್ ಕುರಿತು ಪರ, ವಿರೋಧ; ಸರ್ಕಾರದ ನಿರ್ಧಾರದತ್ತ ಚಿತ್ತ

ಬಸವರಾಜ ಹವಾಲ್ದಾರ
Published 19 ನವೆಂಬರ್ 2024, 5:05 IST
Last Updated 19 ನವೆಂಬರ್ 2024, 5:05 IST
<div class="paragraphs"><p>ಮದ್ಯ</p></div>

ಮದ್ಯ

   

– ಪ್ರಜಾವಾಣಿ ಚಿತ್ರ

ಬಾಗಲಕೋಟೆ: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸ್ವಂತ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ. ನ.20ರಂದು ಮದ್ಯದಂಗಡಿಗಳ ಬಂದ್‌ಗೆ ಕರೆ ನೀಡಿರುವ ವೈನ್‌ ಮರ್ಚಂಟ್ಸ್ ಅಸೋಸಿಯೇಷನ್‌ಗೆ ಬಹುತೇಕರು ಸ್ಪಂದಿಸಲು ಮುಂದಾಗಿದ್ದರೆ, ಕೆಲವರು ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ಹೆಚ್ಚಿನ ಸಂಖ್ಯೆಯಲ್ಲಿರುವ ವೈನ್ ಮರ್ಚಂಟ್ಸ್ ಅಸೋಸಿಯೇಷನ್‌ ಸದಸ್ಯರು ರಾಜ್ಯ ಘಟಕದ ನಿರ್ದೇಶನದಂತೆ ಮದ್ಯದಂಡಗಿಗಳನ್ನು ಬಂದ್ ಮಾಡಲು ಸಿದ್ಧರಾಗಿದ್ದಾರೆ. ಇನ್ನೊಂದೆಡೆ ರಾಜ್ಯ ಪ್ರವಾಸೋದ್ಯಮ ಹೋಟೆಲ್‌ ಮಾಲೀಕರ ಸಂಘದ ಸದಸ್ಯರು ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಲಿಕ್ಕರ್ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ.

ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ 20ರಷ್ಟು ಲಾಭಾಂಶ ನೀಡಬೇಕು. ಅಬಕಾರಿ ಶುಲ್ಕ ಕಡಿಮೆ ಮಾಡಬೇಕು. ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಸಿಕ್ಕಿಬಿದ್ದ ಅಬಕಾರಿ ಅಧಿಕಾರಿಗೆ ಎಕ್ಸಿಕ್ಯುಟಿವ್ ಹುದ್ದೆ ನೀಡಬಾರದು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಹಿನ್ನಲೆಯಲ್ಲಿ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಬಂದ್ ಕರೆಗೆ ಜಿಲ್ಲಾ ಘಟಕವು ಸ್ಪಂದಿಸಲಿದೆ.

ಸಿಎಲ್‌–2ಗಳಲ್ಲಿ ಗ್ರಾಹಕರಿಗೆ ಮದ್ಯ ಸೇವಿಸಲು ಅವಕಾಶ ನೀಡಬೇಕು. ಸಿಎಲ್‌–9 ಮತ್ತು ಸಿಎಲ್‌–7 ಅಥವಾ ಇತರೆ ದೊಡ್ಡ ಹೋಟೆಲ್‌ಗಳಿಗೆ ಗ್ರಾಹಕರು ತೆರಳಿ ಆಹಾರ ಪದಾರ್ಥಗಳನ್ನು ಖರೀದಿಸಲು ಆಗುವುದಿಲ್ಲ. ಆದ್ದರಿಂದ, ಗ್ರಾಹಕರಿಗೆ ಅನುಕೂಲವಾಗುವಂತೆ ಸನ್ನದು ಷರತ್ತುಗಳನ್ನು ಸಡಿಲಿಕೆ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಪ್ರತಿಭಟನೆಗೆ ಫೆಡರೇಷನ್‌ ಮುಂದಾಗಿದೆ.

2005ರಲ್ಲಿ ತಿದ್ದುಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ 29 ಅನ್ನು ಪುನರ್‌ ವಿಮರ್ಶಿಸಿ, ತಿದ್ದುಪಡಿ ಮಾಡಬೇಕು. ಎಂಎಸ್‌ಐಎಲ್‌ ಅಂಗಡಿಗಳನ್ನು ಗ್ರಾಮಾಂತರ ಭಾಗದಲ್ಲಿ ತೆರೆಯಬೇಕು. ಆದರೆ, ನಗರ ಪ್ರದೇಶಗಳಲ್ಲೂ ತೆರೆಯುತ್ತಿರುವುದರಿಂದ ಇತರೆ ಸನ್ನದುದಾರರಿಗೆ ನಿರೀಕ್ಷಿತ ವ್ಯಾಪಾರ–ವಹಿವಾಟು ಆಗುತ್ತಿಲ್ಲ ಎಂಬುದು ಹೋರಾಟಗಾರರ ದೂರಾಗಿದೆ.

‘ನ.20 ರೊಳಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಅಸೋಸಿಯೇಷನ್‌ ನಿರ್ದೇಶನದಂತೆ ಜಿಲ್ಲೆಯಲ್ಲಿಯೂ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗುವುದು. ಎಲ್ಲ ಮದ್ಯದಂಗಡಿ ಮಾಲೀಕರ ಹಿತ ಗಮನದಲ್ಲಿಟ್ಟುಕೊಂಡು ಬಂದ್ ಮಾಡಲಾಗುತ್ತಿದೆ’ ಎಂದು ವೈನ್ ಮರ್ಚಂಟ್ಸ್ ಅಸೋಸಿಯೇಶನ್‌ ಜಿಲ್ಲಾ ಕಾರ್ಯದರ್ಶಿ ಪರಶುರಾಮ ಮುಳಗುಂದ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.