ಹುನಗುಂದ: ‘ವಚನೋತ್ತರ ಕಾಲದ ಅಲಕ್ಷಿತ ಶರಣರಾದ ಗುಂಡಬ್ರಹ್ಮಯ್ಯರನ್ನು ಕುರಿತು ಪ್ರಾಧ್ಯಾಪಕ ಎಲ್.ಜಿ. ಗಗ್ಗರಿ ಅವರು ಬರೆದಿರುವ ಕೃತಿ ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಅತ್ಯುತ್ತಮ ಕೃತಿಯಾಗಿದೆ’ ಎಂದು ಮೈಸೂರಿನ ಜೆಎಸ್ಎಸ್ ಕಾಲೇಜಿನ ಪ್ರಾಧ್ಯಾಪಕ ಬಿ.ಎಸ್. ಸುದೀಪ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹೊನ್ನಕುಸುಮ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಭಾನುವಾರ ನಡೆದ ಪ್ರಾಧ್ಯಾಪಕ ಎಲ್.ಜಿ ಗಗ್ಗರಿ ಅವರ ‘ಗುಂಡಬ್ರಹ್ಮಯ್ಯರು ಸಾಂಸ್ಕೃತಿಕ ಅಧ್ಯಯನ’ ಸಂಶೋಧನಾ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಸಾಹತುಶಾಹಿಯ ಚಿಂತನೆಯ ಫಲವಾಗಿ ಸಾಂಸ್ಕೃತಿಕ ಅಧ್ಯಯನಗಳು ಆರಂಭವಾದವು. ಇವುಗಳ ಉದ್ದೇಶ ಸ್ಥಳೀಯ ಜ್ಞಾನವನ್ನು ಕಟ್ಟಿಕೊಡುವುದು ಮತ್ತು ಸಾಂಸ್ಕೃತಿಕ ಜಗತ್ತನ್ನು ಅರಿಯುವುದಾಗಿತ್ತು. ಅಲಕ್ಷಿತ ಶರಣರಾದ ಗುಂಡಬ್ರಹ್ಮಯ್ಯರ ಅಧ್ಯಯನದಿಂದ ಹೊಸ ಸಾಂಸ್ಕೃತಿಕ ಅಂಶಗಳು ಗುರುತಿಸಲ್ಪಟ್ಟಿವೆ. ಕರ್ನಾಟಕ ಮತ್ತು ಆಂಧ್ರ ಭಾಗದಲ್ಲಿನ ಶರಣ ಸಂಸ್ಕೃತಿಯ ಪರಿಸರದ ಅನಾವರಣಗೊಂಡಿದೆ’ ಎಂದರು.
ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ‘ಸಂಶೋಧನೆ ಜ್ಞಾನದ ಕ್ಷಿತಿಜವನ್ನು ವಿಸ್ತರಿಸುತ್ತದೆ. ಯುವ ಪೀಳಿಗೆಯ ಸಂಶೋಧಕರು ಸ್ಥಳೀಯ ಜ್ಞಾನವನ್ನು, ಸಾಂಸ್ಕೃತಿಕ ಅಧ್ಯಯನಗಳನ್ನು ಕೈಗೊಳ್ಳಬೇಕು. ಸಂಶೋಧನೆಗಳು ಪೂರ್ವಾಗ್ರಹ ಪೀಡಿತ ಚಿಂತನೆಗಳಿಂದ ಕೂಡಿರಬಾರದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೊನ್ನಕುಸುಮ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಎಸ್. ಮುಡುಪಲದಿನ್ನಿ, ‘ಅಜ್ಞಾತದಲ್ಲಿರುವುದನ್ನು ಜ್ಞಾತಗೊಳಿಸುವುದೇ ಸಂಶೋಧನೆ. ಈ ಸಂಶೋಧನೆ ಗುಂಡುಬ್ರಹ್ಮಯ್ಯರ ವ್ರತ ನೇಮಗಳು, ತತ್ವ ಸಿದ್ಧಾಂತ ಮೊದಲಾದ ಅಂಶಗಳನ್ನು ತಿಳಿಸುವ ಮಹತ್ವದ ಕೃತಿಯಾಗಿದೆ’ ಎಂದು ಹೇಳಿದರು.
ಸಂಶೋಧನಾ ಕೃತಿಯನ್ನು ಸಾಹಿತಿ ಎಸ್.ಕೆ ಕೊನೆಸಾಗರ ಲೋಕಾರ್ಪಣೆಗೊಳಿಸಿದರು. ಕಾಲೇಜಿನ ಪ್ರಾಚಾರ್ಯ ಸಿಕಂದರ್ ಧನ್ನೂರು ಪ್ರಾಸ್ತಾವಿಕ ನುಡಿಗಳನಾಡಿದರು. ಎನ್. ಜೆ. ರಾಮವಾಡಗಿ, ಆರಿಫ್ ರಾಜ, ಈರಣ್ಣ ಹುರಳಿ, ಎಲ್. ಜಿ. ಗಗ್ಗರಿ, ಅಭಿಷೇಕ್ ಮೂಡಪಲದಿನ್ನಿ, ಎ. ಎಂ. ಗೌಡರ, ಸಿ. ಎನ್.ರಂಗನಾಥ, ಗೀತಾ ತಾರಿವಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.