ADVERTISEMENT

ಸಾಲದ ಭಾರ ಹೊರಿಸಲಿರುವ ಕಾಂಗ್ರೆಸ್

ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:50 IST
Last Updated 19 ಜೂನ್ 2024, 15:50 IST
ವೀರಣ್ಣ ಚರಂತಿಮಠ
ವೀರಣ್ಣ ಚರಂತಿಮಠ   

ಬಾಗಲಕೋಟೆ: ‘ಐದು ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದ ಮೇಲೆ ಸಾಲದ ಭಾರ ಹೊರಿಸಲಿದೆ. ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿದೆ’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಟೀಕಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ಕಾರ್ಯಗಳಿಗಾಗಿ ಆದಾಯ ಹೆಚ್ಚಿಸಿಕೊಳ್ಳಲು ವಿವಿಧ ವಸ್ತುಗಳ ಬೆಲೆ ಹೆಚ್ಚು ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಅವರು ಅಭಿವೃದ್ಧಿಗಾಗಿ ಮಾಡುತ್ತಿಲ್ಲ. ಗ್ಯಾರಂಟಿಗಾಗಿ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಸ್ಟಾಂಪ್‌ ಡ್ಯೂಟಿ, ಭೂಮಿ ಖರೀದಿ ದರ, ಪೆಟ್ರೋಲ್‌, ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಎಲ್ಲ ವಸ್ತುಗಳ ಬೆಲೆ ಹೆಚ್ಚಳಕ್ಕೆ ಸರ್ಕಾರ ಕಾರಣವಾಗಿದೆ. ಇಷ್ಟು ಸಾಲದೆಂಬಂತೆ ಬೆಂಗಳೂರಿನಲ್ಲಿನ ಸರ್ಕಾರಿ ಆಸ್ತಿ ಮಾರಾಟ ಮಾಡಲು ಮುಂದಾಗಿದೆ. ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಬಾರದು’ ಎಂದು ಆಗ್ರಹಿಸಿದರು.

ADVERTISEMENT

‘ಬೇರೆ ದೇಶದಲ್ಲಿದ್ದ ಬಂಗಾರವನ್ನು ದೇಶಕ್ಕೆ ತರುವ ಕೆಲಸವನ್ನು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಮಾಡಿದೆ. ಆದರೆ, ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲು ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಇದು ಕಾಂಗ್ರೆಸ್ ಆಡಳಿತ’ ಎಂದು ವ್ಯಂಗ್ಯವಾಡಿದರು.

‘ಬೇರೆ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಬೆಲೆ ಹೆಚ್ಚಳ ಮಾಡಿದರೆ ಪ್ರತಿಭಟನೆ ಮಾಡಲಿ. ಅಲ್ಲಿ ಮಾಡಿದ್ದಾರೆ ಎಂದು ನೀವೂ ಮಾಡುವುದು ಸರಿಯಲ್ಲ. ಜನರಿಗೆ ಹೊರೆಯಾಗುತ್ತಿದ್ದು, ಕೂಡಲೇ ಬೆಲೆ ಹೆಚ್ಚಳ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ ವಿವಿಧೆಡೆ ಕೊಲೆಗಳು ಆಗುತ್ತಲೇ ಇವೆ. ಕಾನೂನು ವ್ಯವಸ್ಥೆ ಕುಸಿದಿದೆ. ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ’ ಎಂದು ಟೀಕಿಸಿದರು.

‘ಗ್ಯಾರಂಟಿ ಜಾರಿ ಮಾಡಿದರೆ ಎಲ್ಲ ಮುಚ್ಚಿಕೊಂಡು ಹೋಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕೆಲಸ ಮಾಡುವುದಿಲ್ಲ ಎಂಬುದು ಗೊತ್ತಾಗಿದೆ. ಭೂಸ್ವಾಧೀನ ವಿಳಂಬ ಮಾಡಿರುವುದರಿಂದ ಎರಡು ವರ್ಷಗಳಲ್ಲಿ 9 ರೈಲ್ವೆ ಮಾರ್ಗ ಕಾಮಗಾರಿಗಳು ವಿಳಂಬವಾಗಿವೆ. ಭೂಮಿ ಸ್ವಾಧೀನ ಮಾಡಿಕೊಡಬೇಕು’ ಎಂದರು.

 ಬೃಹತ್‌ ಯೋಗ ಪ್ರದರ್ಶನ ನಾಳೆ

‘ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ ವಿಶ್ವ ಯೋಗ ದಿನ ಅಂಗವಾಗಿ ಜೂನ್‌ 21ರಂದು ನಗರದ ಮೂರು ಕ್ಯಾಂಪಸ್‌ಗಳಲ್ಲಿ ಏಕಕಾಲಕ್ಕೆ ಬೃಹತ್ ಯೋಗ ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ಸಂಘದ ಕಾರ್ಯಾಧ್ಯಕ್ಷ  ವೀರಣ್ಣ ಚರಂತಿಮಠ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬೆಳಿಗ್ಗೆ 6.45ಕ್ಕೆ ನಗರದ ಹಳೆ ಕ್ಯಾಂಪಸ್ ನವನಗರದ ಹಾನಗಲ್ ಕುಮಾರೇಶ್ವರ ಮೆಡಿಕಲ್ ಕಾಲೇಜು ಮೈದಾನ ಹಾಗೂ ವಿದ್ಯಾಗಿರಿಯ ಬಿಇಸಿ ಮೈದಾನದಲ್ಲಿ ಯೋಗಭ್ಯಾಸ ಮಾಡಲಿದ್ದಾರೆ. ಮೂರೂ ಕಡೆಗಳಲ್ಲಿ ಸೇರಿ 10 ಸಾವಿರಕ್ಕೂ ಅಧಿಕ ಜನ ಭಾಗಿಯಾಗಲಿದ್ದಾರೆ’ ಎಂದರು. ‘ನಗರದ ಹಳೆ ಕ್ಯಾಂಪಸ್‌ನಲ್ಲಿ ಆಯುರ್ವೇದ ಕಾಲೇಜಿನ ಡಾ.ಆರ್.ಬಿ.ಹೊಸಮನಿ ತಂಡ ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಹಿರಿಯ ಯೋಗಪಟು ಸಂಗಣ್ಣ ಕುಪಸ್ತ ಯೋಗ ಅಭ್ಯಾಸ ಮಾಡಿಸಲಿದ್ದಾರೆ’ ಎಂದು ಹೇಳಿದರು. ‘ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಆಚರಣೆಗೆ ಜಾಗತಿಕ ಮನ್ನಣೆ ತಂದು ಕೊಟ್ಟರು. ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ರೂಢಿಸಿಕೊಳ್ಳುವುದಕ್ಕಾಗಿ ಯೋಗ ಮಾಡಬೇಕು’ ಎಂದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ ಔಷಧ ವಿಜ್ಞಾನ ಕಾಲೇಜಿನ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಇದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.