ಜಮಖಂಡಿ: ಕೋವಿಡ್–19ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಜಮಖಂಡಿ ನಗರ ಸೇರಿದಂತೆ ತಾಲ್ಲೂಕಿನ ಬಹುತೇಕ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಬಾಗಿಲು ಹಾಕಿವೆ.
ನಗರದಲ್ಲಿ 35 ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಇವೆ. ಈ ವೈದ್ಯರು ಮನೆಯಲ್ಲೇ ಉಳಿದಿದ್ದಾರೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಲಾಕ್‌ಡೌನ್‌ನಿಂದಾಗಿ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಇದು ಜನಸಾಮಾನ್ಯರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ಒದಗಿಸಬೇಕು ಎನ್ನುವ ಸರ್ಕಾರದ ಉದ್ದೇಶಕ್ಕೆ ಅಡ್ಡಿಯಾಗಿದೆ. ಆರೋಗ್ಯ ಸೇವೆಯನ್ನು ತುರ್ತು ಹಾಗೂ ಅವಶ್ಯ ಸೇವೆ ಎಂದು ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಖಾಸಗಿ ವೈದ್ಯರು ಇದಕ್ಕೂ ಜಗ್ಗುತ್ತಿಲ್ಲ. ಪರವಾನಗಿ ರದ್ದು ಮಾಡುತ್ತೇವೆ ಎಂದರೂ ಸೊಪ್ಪು ಹಾಕುತ್ತಿಲ್ಲ.
ಅನಾರೋಗ್ಯ ಪೀಡಿತ ತಮ್ಮ ತಂದೆಯನ್ನು ಕರೆದುಕೊಂಡು ಖಾಸಗಿ ಆಸ್ಪತ್ರೆಗೆ ಹೋದಾಗ ವೈದ್ಯರು ಚಿಕಿತ್ಸೆ ನಿರಾಕರಿಸಿದ ಬಗ್ಗೆ ಯುವಕನೊಬ್ಬ ಮಂಗಳವಾರ ಪತ್ರಿಕೆ ಗಮನಕ್ಕೆ ತಂದಿದ್ದು, ನಂತರ ಪ್ರಜಾವಾಣಿ ಪ್ರತಿನಿಧಿ ಹಲವು ಕ್ಲಿನಿಕ್‌ಗಳಿಗೆ ಹೋದಾಗ ಬಾಗಿಲು ಹಾಕಿರುವುದು ಕಂಡುಬಂದಿತು.
ಕೆಲವು ವೈದ್ಯರು ಮನೆಗಳಲ್ಲಿ ಕ್ಲಿನಿಕ್ ಹೊಂದಿದ್ದು, ಗೇಟ್‌ಗೆ ಬೀಗ ಹಾಕಿಕೊಂಡಿದ್ದಾರೆ. ವಿಚಾರಿಸಲು ಹೋದವರನ್ನು ಅನುಮಾನದಿಂದ ನೋಡುತ್ತಾರೆ. ನಮ್ಮಲ್ಲಿ ಚಿಕಿತ್ಸೆ ಬಂದ್ ಮಾಡಲಾಗಿದೆ. ಗುಳಿಗೆ ಕೊಡುತ್ತೇನೆ. ಮುಟ್ಟಿ ತಪಾಸಣೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಜ್ವರ, ತಲೆನೋವು, ಹೊಟ್ಟೆನೋವು, ರಕ್ತದೊತ್ತಡ, ಮಧುಮೇಹದಂತಹ ಸಾಮಾನ್ಯ ಸಮಸ್ಯೆಗಳಿಗೆ ಒಳಗಾದವರೂ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ.
ಮೆಡಿಕಲ್ ಸ್ಟೋರ್‌ಗಳಿಂದ ಮಾತ್ರೆ ತಂದು ನುಂಗಿ ರೋಗಿಗಳು ತಾವೇ ಸ್ವಯಂ ಚಿಕಿತ್ಸೆಯ ಕಂಡುಕೊಳ್ಳುವ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ.
‘ಎಲ್ಲೆಲ್ಲೂ ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಇದೆ. ಯಾರಿಗಾದರೂ ಸೋಂಕು ತಗುಲಿದ್ದು, ಅದು ನಮಗೂ ಬಂದರೆ ಏನು ಮಾಡುವುದು. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದೂ ಮುಖ್ಯ. ಅದಲ್ಲದೇ ಲಾಕ್‌ಡೌನ್ ಕೂಡ ಇರುವುದರಿಂದ ನಾವು ಕ್ಲಿನಿಕ್ ಬಂದ್ ಮಾಡಿದ್ದೇವೆ’ ಎಂದು ಖಾಸಗಿ ವೈದ್ಯರೊಬ್ಬರು ಹೇಳಿದರು. ಹಾಗಾದರೆ ರೋಗಿಗಳು ಏನು ಮಾಡಬೇಕು ಎಂದು ಪ್ರಶ್ನಿಸಿದರೆ ಸರ್ಕಾರಿ ಆಸ್ಪತ್ರೆಗೆ ಹೋಗಲಿ ಬಿಡಿ ಎಂದು ಉತ್ತರ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಉಪಚಾರ ಸಿಗದ ಕಾರಣ ಸರ್ಕಾರಿ ಆಸ್ಪತ್ರೆ ಮೇಲಿನ ಅವಲಂಬನೆ ಹೆಚ್ಚಾಗಿದೆ. ಇದರಿಂದಾಗಿ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಖಾಸಗಿಯವರು ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಯಸ್ಸಾದವರಿಗೆ, ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತಿವೆ. ಮಾನವೀಯತೆ ಮರೆತ ವೈದ್ಯರ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
*
ಎಲ್ಲ ಖಾಸಗಿ ವೈದ್ಯರಿಗೂ ಕರೆ ಮಾಡಿ ಆಸ್ಪತ್ರೆಗೆ ಬಂದ ರೋಗಿಗಳನ್ನು ಉಪಚರಿಸಲು ಸೂಚಿಸಿದ್ದೇನೆ ಬುಧವಾರದಿಂದ ನಾನೇ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ವಿಚಾರಿಸುವೆ.
-ಗೈಬುಸಾಬ್ ಗಲಗಲಿ, ತಾಲ್ಲೂಕು ವೈದ್ಯಾಧಿಕಾರಿ
*
ಖಾಸಗಿ ವೈದ್ಯರು ಮಾನವೀಯತೆ ಮರೆಯಬಾರದು. ವಯೋವೃದ್ಧರು, ಮಕ್ಕಳು, ಬಾಣಂತಿಯರು ಪರದಾಡುವ ಸ್ಥಿತಿ ಬಂದಿದೆ. ಚಿಕಿತ್ಸೆ ನಿರಾಕರಿಸಿದವರ ಮೇಲೆ, ಸರ್ಕಾರ ಕ್ರಮ ಕೈಗೊಳ್ಳಬೇಕು.
-ಆನಂದ ನ್ಯಾಮಗೌಡ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.