ಗುಳೇದಗುಡ್ಡ : ‘ಗೋವು ನಮ್ಮ ತಾಯಿ. ಆದರೆ ರಾಜ್ಯದ ಎಲ್ಲೆಡೆ ಗೋವುಗಳ ಮಾರಣಹೋಮ ನಡೆಯುತ್ತಿದೆ. ಇದನ್ನು ನೋಡಿಯೂ ನಾವು ಸುಮ್ಮನೆ ಕುಳಿತುಕೊಳ್ಳದೆ ಗೋ ಹತ್ಯೆ ಮಾಡುವವರ ಕೈ ಕಡಿಯಬೇಕಾಗಿದೆ’ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ಶ್ರೀಕಾಂತ ಹೊರಕೇರಾ ಆಕ್ರೋಶ ವ್ಯಕ್ತಪಡಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆದುಕೊಳ್ಳುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಬುಧವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
‘ರಾಮನ ಹೆಸರು ಇಟ್ಟುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸಲ್ಮಾನರ ವೋಟಿಗಾಗಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಹಿಂದೂಗಳ ಘೋಷಣೆಗಳು ಈಗ ಬದಲಾಗಬೇಕಿದೆ. ಕಾನೂನು ಉಲ್ಲಂಘನೆ ಮಾಡಿದರೆ ನಾವು ಸುಮ್ಮನಿರಬೇಕೆ? ಗೋ ಹತ್ಯೆ ಮಾಡಿದವರನ್ನು ಹಿಡಿದುಕೊಟ್ಟರೆ ಅಂತವರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇದೆಂತ ಕಾನೂನು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ 1008 ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಮಾತನಾಡಿ, ‘ಗೋವಿನಲ್ಲಿ ಅಪಾರವಾದ ಶಕ್ತಿ ಇದೆ. ಪ್ರಾಣಿ ಕೊಲ್ಲುವುದು ಧರ್ಮವಲ್ಲ. ಜಾಗೃತಿ ಮೂಡಿಸಬೇಕು. ಧರ್ಮ, ಭಾಷೆ, ಪ್ರಾಂತ್ಯ ಬಿಟ್ಟು ಕಾಮಧೇನು ಕೊಲೆ ನಿಲ್ಲಲಿ. ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಿ ಜನಾಂಗೀಯ ಗೌರವಕ್ಕೆ ಧಕ್ಕೆ ಆಗದಂತೆ ಸರ್ಕಾರ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.
ಮುರುಘಾಮಠದ ಶ್ರೀಕಾಶೀನಾಥ ಸ್ವಾಮೀಜಿ,ಶ್ರೀಕಾಡಸಿದ್ದೇಶ್ವರ ಸ್ವಾಮೀಜಿ ಶ್ರೀಒಪ್ಪತ್ತೇಶ್ವರ ಸ್ವಾಮೀಜಿ,ಶ್ರೀಗುರುಬಸವ ದೇವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಹಾದೇವ ಜಗತಾಪ, ಸಂಪತ್ತಕುಮಾರ ರಾಠಿ, ರಂಗನಾಥ ವಾಲಿಕಾರ ಪುರಸಭೆ ಸದಸ್ಯ ಪ್ರಶಾಂತ ಜವಳಿ,ಬಸವರಾಜ ಬನ್ನಿ, ಗಣೇಶ ಶೀಲವಂತ, ಕಮಲಕಿಶೋರ ಮಾಲಪಾಣಿ, ಭಾಗ್ಯಾ ಉದ್ನೂರ, ಗೋದಾವರಿ ಬಾಪೂರಿ, ರಾಜು ಚಿತ್ತರಗಿ, ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.