ADVERTISEMENT

ವಿಶ್ವಪ್ರಸನ್ನತೀರ್ಥ ಶ್ರೀ ವಿರುದ್ಧದ ಹರಿಪ್ರಸಾದ್ ಹೇಳಿಕೆಗೆ ಖಂಡನೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:45 IST
Last Updated 25 ಅಕ್ಟೋಬರ್ 2024, 15:45 IST
ಬಿ.ಕೆ.ಹರಿಪ್ರಸಾದ್ ಹೇಳಿಕೆ ಖಂಡಿಸಿ ಬಾಗಲಕೋಟೆಯಲ್ಲಿ ಶುಕ್ರವಾರ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು
ಬಿ.ಕೆ.ಹರಿಪ್ರಸಾದ್ ಹೇಳಿಕೆ ಖಂಡಿಸಿ ಬಾಗಲಕೋಟೆಯಲ್ಲಿ ಶುಕ್ರವಾರ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು   

ಬಾಗಲಕೋಟೆ: ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕುರಿತು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆ ಖಂಡಿಸಿ ಬ್ರಾಹ್ಮಣ ತರುಣ ಸಂಘದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಬ್ರಾಹ್ಮಣ ಸಮಾಜದವರು ಬಿ.ಕೆ. ಹರಿಪ್ರಸಾದ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ‘ಪೂಜ್ಯರ ಬಗ್ಗೆ ಮಾತನಾಡುವಾಗ ಎಚ್ಚರವಹಿಸಬೇಕು. ಹರಿಪ್ರಸಾದ್ ಶ್ರೀಗಳವರಿಗೆ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಮಾತನಾಡಿ, ‘ಬ್ರಾಹ್ಮಣ ಸಮಾಜದ ತ್ರಿಮತಸ್ಥ ಸ್ವಾಮೀಜಿ ಹಾಗೂ ಮುಖಂಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಸಮಾಜ ಸಹಿಸುವುದಿಲ್ಲ’ ಎಂದು ಹೇಳಿದರು.

ADVERTISEMENT

ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ ಹಾಗೂ ಪಂ.ಭೀಮಸೇನಾಚಾರ್ಯ ಪಾಂಡುರಂಗಿ ಮಾತನಾಡಿ, ‘ಪೇಜಾವರ ಶ್ರೀಗಳು ಎಲ್ಲ ಸಮಾಜದೊಡನೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಗೋಶಾಲೆ, ದೀನದಲಿತರ ಏಳಿಗೆಗೆ ಶ್ರಮಿಸಿದ್ದಾರೆ. ಅಂಥವರ ಬಗ್ಗೆ ರಾಜಕಾರಣಿಗಳು ಮಾತನಾಡುವಾಗ ಎಚ್ಚರದಿಂದ ಇರಬೇಕು’ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ ಮಾತನಾಡಿ, ‘ಬ್ರಾಹ್ಮಣರ ಸಂಖ್ಯೆ ಕಡಿಮೆ ಎನ್ನುವ ಮನೋಭಾವದಲ್ಲಿ ಸಮಾಜದ ಕುರಿತಾಗಿ ಲಘುವಾಗಿ ಮಾತನಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಸಮಾಜ ಪರಿವರ್ತನೆಯ ತಾಕತ್ತು ನಮಗಿದೆ. ಸಂದರ್ಭ ಬಂದಾಗ ಉತ್ತರಿಸುತ್ತೇವೆ’ ಎಂದರು.

ಬ್ರಾಹ್ಮಣ ಮಹಾಸಭಾ ಜಿಲ್ಲಾ ಅಧ್ಯಕ್ಷ ನರಸಿಂಹ ಆಲೂರ, ಕಾರ್ಯದರ್ಶಿ ಎಸ್.ಕೆ. ಕುಲಕರ್ಣಿ, ತರುಣ ಸಂಘದ ಕಾರ್ಯದರ್ಶಿ ಡಿ.ಬಿ. ಕುಲಕರ್ಣಿ, ಉದ್ಯಮಿಗಳಾದ ಎಸ್.ವಿ. ಸತ್ಯನಾರಾಯಣ, ಪವನ ಸೀಮಿಕೇರಿ, ಎಸ್.ವಿ. ಶಾಮ್, ಪ್ರದೀಪ ಪರ್ವತಿಕರ, ಭಾಸ್ಕರ ಮನಗೂಳಿ, ಹುನಗುಂದದ ವಕೀಲ ವೆಂಕಟೇಶ ದೇಶಪಾಂಡೆ, ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಶುಭದಾ ದೇಶಪಾಂಡೆ, ವಿನಾಯಕ ದೇಸಾಯಿ, ನವೀನ ದೇಶಪಾಂಡೆ, ಅನಂತ ಮಳಗಿ, ರಾಘವೇಂದ್ರ ರಾವ್, ಗಿರೀಶ ಉಡುಪಿ, ಕೇಶವ ಕುಲಕರ್ಣಿ, ಶ್ರೀಹರಿ ಡಂಬಳ, ನರಸಿಂಹ ಕಾಳಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.