ರಬಕವಿ ಬನಹಟ್ಟಿ: ಇಲ್ಲಿಯ ಶ್ರೀನಿವಾಸ ಚಲನಚಿತ್ರ ಮಂದಿರದಿಂದ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ 10 ತಿಂಗಳಾದರೂ ಇನ್ನು ಮುಕ್ತಾಯಗೊಂಡಿಲ್ಲ. ರಸ್ತೆ ಕಾಮಗಾರಿ ಮುಕ್ತಾಯಗೊಳ್ಳದೆ ಇರುವುದರಿಂದ ಸುತ್ತ ಮುತ್ತಲಿನ ಮನೆಯ ಜನರು, ಅಂಗಡಿಕಾರರು ದೂಳಿನಿಂದ ಹೈರಾಣಾಗಿದ್ದಾರೆ.
ರಸ್ತೆ ಕಾಮಗಾರಿ ಲೋಕಸಭಾ ಚುನಾವಣೆಗಿಂತ 3 ತಿಂಗಳ ಮೊದಲು ಆರಂಭವಾಗಿತ್ತು. ಇದುವರೆಗೆ ಮುಗಿಯದೆ ಇರುವುದರಿಂದ ರಬಕವಿ, ರಾಮಪುರ, ಹೊಸೂರ ಮತ್ತು ಬನಹಟ್ಟಿ ಜನತೆಗೆ ಬಹಳಷ್ಟು ತೊಂದರೆಯಾಗಿದೆ.
ರಸ್ತೆಯು ಯಾವಾಗಲೂ ದೂಳಿನಿಂದ ತಿಂಬಿದೆ. ಇದರಿಂದಾಗಿ ರಸ್ತೆಯ ಬದಿಯಲ್ಲಿರುವ ಮನೆಗಳಿಗೆ, ಕಿರಾಣಿ, ಸ್ಟೇಷನರಿ, ಔಷಧ ಅಂಗಡಿಗಳು ಮತ್ತು ಆಸ್ಪತ್ರೆಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ. ಇನ್ನೂ ಇದೇ ಮಾರ್ಗದ ಮೂಲಕ ಶಾಲಾ ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ರಸ್ತೆಯ ಮೇಲಿನ ಕಲ್ಲುಗಳಿಂದ ಮತ್ತು ದೂಳಿನಿಂದ ಸಮಸ್ಯೆಯಾಗುತ್ತಿದೆ. ಇದು ರಬಕವಿ ಬನಹಟ್ಟಿ ನಗರಗಳ ಮಧ್ಯದಲ್ಲಿಯ ಪ್ರಮುಖ ರಸ್ತೆಯಾಗಿದೆ. ನಿತ್ಯ ಸಂಚರಿಸುವ ನೂರಾರು ದ್ವಿಚಕ್ರ ವಾಹನಗಳಿಗೆ, ಟಂಟಂ ಚಾಲಕರಿಗೆ ಮತ್ತು ವಾಹನ ಸವಾರರಿಗೆ ಬಹಳಷ್ಟು ತೊಂದರೆಯಾಗಿದೆ.
ಗುತ್ತಿಗೆದಾರರ ಜೊತೆಗೆ ಮಾತನಾಡಿದ್ದೇವೆ. ಇನ್ನೂ ಮಳೆಗಾಲ ಇರುವುದರಿಂದ ರಸ್ತೆ ಕಾಮಗಾರಿಯಲ್ಲಿ ವಿಳಂಬವಾಗಿದೆ. ಆದಷ್ಟು ಬೇಗನೆ ಕಾಮಗಾರಿಯನ್ನು ಆರಂಭಿಸಲಾಗುವುದುಎಸ್. ಆರ್ ಬಂಡಿವಡ್ಡರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಜಮಖಂಡಿ
ರಸ್ತೆ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸಾಕಷ್ಟು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವನ್ನುಂಟು ಮಾಡಿದೆಬಸವರಾಜ ಗುಡೋಡಗಿ ಸದಸ್ಯರು ರಬಕವಿ ಬನಹಟ್ಟಿ ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.