ರಬಕವಿ ಬನಹಟ್ಟಿ: ಮುಂಗಾರು ಆರಂಭದ ಮೊದಲ ಹಬ್ಬವಾಗಿರುವ ಕಾರು ಹುಣ್ಣಿಮೆಯು ಹಬ್ಬಗಳನ್ನು ಕರೆದುಕೊಂಡು ಹಬ್ಬವಾಗಿದೆ ಎಂದು ಗ್ರಾಮೀಣ ಪ್ರದೇಶದ ಜನರು ಮಾತು. ಇಲ್ಲಿಂದಲೇ ನಮ್ಮ ಹಬ್ಬಗಳು ಆರಂಭವಾಗುತ್ತವೆ.
ಭಾರತೀಯ ಒಕ್ಕಲುತನದಲ್ಲಿ ಮಹತ್ವ ಪಾತ್ರ ವಹಿಸುವ ಕಾರು ಹುಣ್ಣಿಮೆಯಲ್ಲಿ ಎತ್ತುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ರೈತರ ಜೊತೆಗೆ ಹೊಲ ತೋಟಗಳಲ್ಲಿ ಒಂದಾಗಿ ದುಡಿಯುವ ಎತ್ತುಗಳಿಗೆ ಪೂಜೆ ಸಲ್ಲಿಸುವುದು ಅತ್ಯಂತ ಮಹತ್ವದ್ದಾಗಿದೆ.
ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಕಾರು ಹುಣ್ಣಿಮೆಯ ಮುನ್ನಾ ದಿನ ಮಣ್ಣಿನ ಎತ್ತುಗಳನ್ನು ಮನೆಗೆ ತೆಗೆದುಕೊಂಡು ಬಂದು ಅವುಗಳನ್ನು ಪೂಜಿಸುತ್ತಾರೆ. ನಂತರ ಕೋಡುಬಳೆಗಳಿಂದ ಅವುಗಳ ಕೋಡುಗಳನ್ನು ಶೃಂಗರಿಸುತ್ತಾರೆ.
ರೈತರು ಕೂಡಾ ಎತ್ತುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಬಣ‍್ಣಗಳಿಂದ ಶೃಂಗಾರ ಮಾಡಿ ಪೂಜಿಸುತ್ತಾರೆ.
ಬನಹಟ್ಟಿಯಲ್ಲಿ ಕಾರು ಹುಣ್ಣಿಮೆಯ ಅಂಗವಾಗಿ ಸ್ಥಳೀಯ ಮಂಗಳವಾರ ಪೇಟೆಯಲ್ಲಿ ಮಣ‍್ಣಿನ ಎತ್ತುಗಳ ಮಾರಾಟ ಜೋರಾಗಿತ್ತು. ಸಮೀಪದ ಹೊಸೂರಿನ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳು ಬೆಳಗ್ಗೆ 6 ಗಂಟೆಗೆ ಮಣ್ಣಿನ ಎತ್ತುಗಳನ್ನು ಮಾಡಲು ಆರಂಭಿಸಿ ಸಂಜೆ 7 ಗಂಟೆಯವರೆಗೆ ಮಾರಾಟ ಮಾಡಿದರು.
ರಬಕವಿ ಬನಹಟ್ಟಿಯಲ್ಲಿ ಅಂದಾಜು ಐದು ಸಾವಿರಕ್ಕೂ ಹೆಚ್ಚು ಜೋಡಿ ಎತ್ತುಗಳನ್ನು ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಎತ್ತುಗಳನ್ನು ತಲೆಯ ಮೇಲೆ ಇಟ್ಟುಕೊಂಡು ಮನೆ ಮನೆಗೆ ತೆರಳಿ ಮಾರಾಟ ಮಾಡಿ ಬರುತ್ತಾರೆ. ರೂ. 30 ರಿಂದ ರೂ.150 ರವರೆಗೆ ಎತ್ತುಗಳು ಮಾರಾಟಗೊಂಡವು.
ಹೊಸೂರ ಗ್ರಾಮದ 90 ವರ್ಷದ ಚಂದ್ರವ್ವ ಕುಂಬಾರ ಎಪ್ಪತ್ತೈದು ವರ್ಷದಿಂದ ಎತ್ತುಗಳ ನಿರ್ಮಾಣ ಮಾಡುತ್ತ ಬಂದಿದ್ದಾರೆ. “ ತಮ್ಮ ಒಂದು ಆಣೆಕ್ಕ ಎತ್ತುಗಳನ್ನು ಮಾರಿದಾಕಿ ನಾನು” ಎಂದು ಹೇಳುತ್ತಾರೆ. ಅವರ ಮನೆಯ ಸದಸ್ಯರಾದ ಯಲ್ಲವ್ವ, ಸುಜಾತಾ, ರಾಜೇಶ್ವರಿ, ಶಾಂತವ್ವ ಕೂಡಾ ಎತ್ತುಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. 65 ವರ್ಷದ ಈರಪ್ಪ ಕುಂಬಾರ ಐವತ್ತು, ಶಿವಪ್ಪ ಕುಂಬಾರ ಮೂವತ್ತೈದು ಮತ್ತು ಉಮೇಶ ಕುಂಬಾರ 25 ವರ್ಷಗಳಿಂದ ಈ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ನಮ್ಮ ರೈತರು ಒಂದು ವರ್ಷದ ಮಳೆಗಾಲದ ಅವಧಿಯಲ್ಲಿ ಐದು ಮಣ್ಣಿನ ಪೂಜೆ ಮಾಡುತ್ತಾರೆ. ಎತ್ತುಗಳ ಪೂಜೆ ಪ್ರಥಮ ಮಣ್ಣಿನ ಪೂಜೆ, ನಂತರ ಆಷಾಢ ಮಾಸದಲ್ಲಿಯ ನಾಲ್ಕು ಮಂಗಳವಾರದಂದು ಪೂಜಿಸುವ ಗುಳ್ಳವ್ವ, ಶ್ರಾವಣದಲ್ಲಿ ನಾಗಪಂಚಮಿಯ ನಾಗದೇವತೆ, ಚತುರ್ಥಿಯ ಗಣೇಶ ನಂತರ ಕೆಲವರು ಗೌರಿಯನ್ನು ಇಲ್ಲವೆ ಶೀಗೆ ಹುಣ್ಣಿಮೆಯ ದಿನದಂದು ಶೀಗವಳನ್ನು ಪೂಜಿಸುತ್ತಾರೆ.
ಕಾರು ಹುಣ್ಣುಮೆಯ ದಿನದಂದು ಸಂಜೆ ಎತ್ತುಗಳ ಓಟದ ಸ್ಪರ್ಧೆಯೊಂದಿಗೆ ಕಾರು ಹುಣ್ಣಿಮೆ ಮುಕ್ತಾಯಗೊಂಡರೆ ಇದು ಮುಂದೆ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದಕ್ಕೆ ಮುನ್ನುಡಿಯಾಗುತ್ತದೆ.
ಜಗತ್ತು ಆಧುನಿಕತೆಯತ್ತ ಸಾಗಿದ್ದರೂ ನಮ್ಮ ಗ್ರಾಮೀಣ ಭಾಗದ ಜನರು ಇನ್ನೂ ನಮ್ಮ ದೇಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದಕ್ಕೆ ಕಾರು ಹುಣ್ಣಿಮೆ ಸಾಕ್ಷಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.