ಪ್ರತಿ ಮೃತ ದೇಹ ಗುಣಿಯಲ್ಲಿ (ತೆಗ್ಗು) ಹಾಕುವ ಮುನ್ನ ಊದುಕಡ್ಡಿ ಬೆಳಗಿ, ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಕಿರಿಯರಿಗೆ ಹಿರಿಯನಾಗಿ, ಹಿರಿಯ ಜೀವಗಳಿಗೆ ಮನೆಯ ಮಗನಾಗಿ ಮಣ್ಣು ಹಾಕುತ್ತೇನೆ..
ಆಂಬುಲೆನ್ಸ್ ಚಾಲಕ ಆಗಿರುವ ನಾನು, ಜಿಲ್ಲೆಯಲ್ಲಿ ಕೋವಿಡ್‌ಗೆ ಮೊದಲು ಬಲಿಯಾದ 78 ವರ್ಷದ ವೃದ್ಧರಿಂದ ಮೊದಲುಗೊಂಡ ಇಲ್ಲಿಯವರೆಗೆ ನೂರಾರು ಮಂದಿಯ ಅಂತ್ಯಕ್ರಿಯೆ ಮುಂದೆ ನಿಂತು ಮಾಡಿದ್ದೇನೆ.
ಮೊದಲಿಗೆ ಭಯ, ಮನಸ್ಸಿಗೆ ಬೇಸರವಾಗುತ್ತಿತ್ತು. ಈಗ ಇಲ್ಲ. ಸಾವಿಗೆ ಮಾತ್ರ ಬಡವ–ಶ್ರೀಮಂತ, ಜಾತಿಯ ಭೇದವಿಲ್ಲ. ದೇವರು ದೊಡ್ಡವನು. ಯಾವ ಜನ್ಮದ ಋಣವೋ ಎಲ್ಲ ಜಾತಿಯವರಿಗೂ ಮಣ್ಣು ಮಾಡುವ ಪುಣ್ಯದ ಕೆಲಸ ನನಗೆ ವಹಿಸಿದ್ದಾನೆ ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ.
ಇದೊಂದು ವಿಚಿತ್ರ ಸನ್ನಿವೇಶ. ಕೋವಿಡ್‌ಗೆ ತುತ್ತಾಗಿ ನ್ಯಾಯಾಧೀಶರೊಬ್ಬರ ತಾಯಿ ಸಾವಿಗೀಡಾದರು. ಅವರು ಆಂಬುಲೆನ್ಸ್ ಬಳಿ ನಿಂತು ಕೊನೆಯ ಬಾರಿಗೆ ತಾಯಿಯ ಮುಖ ನೋಡಿ ಅಲ್ಲಿಯೇ ನಿಂತು ಅತ್ತು ಹೋದರು.
‘ನಿಮಗೂ ವಯಸ್ಸಾಗಿದೆ. ಈ ಕೆಲಸ ಆಗೊಲ್ಲ ಎಂದು ಬರೆದುಕೊಟ್ಟು ಬಿಟ್ಟುಬಿಡಿ’ ಎಂದು ಪತ್ನಿ, ಮಕ್ಕಳು ಹಲವು ಬಾರಿ ಒತ್ತಾಯಿಸಿದ್ದಾರೆ. ಮನಸ್ಸು ಒಪ್ಪೊಲ್ಲ, ಹಾಗೆ ಬಿಡೋಕೆ ಬರೊಲ್ಲ.
–ಕೃಷ್ಣಪ್ಪ ಮರಡಿಮನಿ, ಅಂತ್ಯಕ್ರಿಯೆ ನೆರವೇರಿಸುವ ತಂಡದ ಪ್ರಮುಖ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.