ಬಾಗಲಕೋಟೆ: ‘ನನ್ನ ವಿರುದ್ಧ ಟೀಕೆ ಮಾಡುವ ಮೊದಲು ಕಾರ್ಖಾನೆ ಉಳಿಸಲು ನೀವೇನು ಮಾಡಿದ್ದೀರಿ ಎಂಬುದನ್ನು ಹೇಳಿ?’ ಎಂದು ಗೋವಿಂದ ಕಾರಜೋಳ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸವಾಲು ಹಾಕಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೋವಿಂದ ಕಾರಜೋಳ ಅವರ ಡ್ರೈವರ್‌ಗೆ ಆರು ವರ್ಷಗಳ ಕಾಲ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಸರ್ಕಾರದಿಂದ ವೇತನ ನೀಡಲಾಗಿತ್ತು. ನಾನು ಪ್ರಶ್ನೆ ಎತ್ತಿದ ಮೇಲೆ ಡ್ರೈವರ್ ವೇತನ ಮರುಪಾವತಿ ಮಾಡಿದ. ಅವನ ವಿರುದ್ಧ ಏನು ಕ್ರಮಕೈಗೊಳ್ಳಲಾಯಿತು? ಈ ಘಟನೆ ಕಾರಜೋಳ ಅವರಿಗೆ ರೈತರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ’ ಎಂದು ವ್ಯಂಗ್ಯವಾಡಿದರು.
‘ಬಿಡಿಸಿಸಿಯಿಂದ ಪಡೆಯುವಾಗ ತಿಳಿಸಿದ್ದ ಉದ್ದೇಶ ಬಿಟ್ಟು ಬೇರೆ ಉದ್ದೇಶಕ್ಕೆ ಹಣ ಬಳಸಲಾಗಿದೆ. ಎಚ್ ಆ್ಯಂಡ್ ಟಿ ಗೆ ತೆಗೆದುಕೊಂಡಿದ್ದ ₹11 ಕೋಟಿ ದುರ್ಬಳಕೆಯಾಗಿದೆ. 362 ಕಾರ್ಮಿಕರ ಮೇಲೆ ಸಾಲ ಹೊರಿಸಲಾಗಿದೆ. ಕಾರ್ಮಿಕರ ಟೆಂಟಿಗೆ ಬೆಂಕಿ ಹಚ್ಚಲಾಯಿತು. ಬೆಂಕಿ ಹಚ್ಚಿದವರನ್ನು ಹಿಡಿಯುವುದು ಬಿಟ್ಟು, ಕಾರ್ಖಾನೆಯ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಆಗ ಮಂತ್ರಿಯಾಗಿ ಏನು ಮಾಡಿದೀರಿ’ ಎಂದು ಪ್ರಶ್ನಿಸಿದರು. ಆ ಬಗ್ಗೆ ದಾಖಲೆಗಳಿವೆ ಎಂದು ‘ಪೆನ್ ಡ್ರೈವ್’ ತೋರಿಸಿದರು.
‘ಹಿಂದಿನ ಸರ್ಕಾರವು ಕಾರ್ಖಾನೆ ಆರಂಭಕ್ಕೆ ₹10 ಕೋಟಿ ಗ್ಯಾರಂಟಿ ನೀಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ₹40 ಕೋಟಿ ಸಾಲಕ್ಕೆ ಗ್ಯಾರಂಟಿ ನೀಡುವುದಾಗಿ ಹೇಳಿದೆ. ಶೀಘ್ರವೇ ಲೀಸ್ ನೀಡಲು ಟೆಂಡರ್ ಕರೆಯಲಾಗುವುದು’ ಎಂದು ಹೇಳಿದರು.
‘ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಇಂದಿನ ಸ್ಥಿತಿಗೆ ಕಾರಣರಾದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
‘ಈಗಾಗಲೇ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಮಗ್ರ ತನಿಖೆಗೂ ಕ್ರಮಕೈಗೊಳ್ಳಲಾಗುವುದು’ ಎಂದರು.
‘ಏಕವಚನ ಸಂಸ್ಕೃತಿ ನನ್ನದಲ್ಲ’
ಬಾಗಲಕೋಟೆ: ‘ಗೋವಿಂದ ಕಾರಜೋಳ ಸಾಹೇಬ್ರು ನನ್ನನ್ನ ಏಕವಚನದಲ್ಲಿ ಟೀಕಿಸಿದ್ದಾರೆ. ನಾನೂ ಹಾಗೆಯೇ ಟೀಕಿಸಿದಬಹುದು. ಆದರೆ ಅದು ನಾನು ಬೆಳೆದು ಬಂದ ಸಂಸ್ಕೃತಿಯಲ್ಲ’ ಎಂದು ಸಚಿವ ಆರ್.ಬಿ. ತಿಮ್ಮಾಪುರ ತಿರುಗೇಟು ನೀಡಿದರು. ‘ರಾಜಕೀಯದಲ್ಲಿ ಟೀಕೆಗಳು ಸಹಜ. ಆದರೆ ಇನ್ನೊಬ್ಬರ ವಯಸ್ಸು ಹುದ್ದೆಗೆ ಗೌರವ ನೀಡಬೇಕು. ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕೃತಿ ತೋರಿಸುತ್ತದೆ’ ಎಂದು ಟೀಕಿಸಿದರು. ‘ಕುಟುಂಬದ ಬಗ್ಗೆಯೂ ಮಾತನಾಡಿದ್ದಾರೆ. ನೀವು ನಿಮ್ಮ ಮಗ ಏನು ಮಾಡಿದ್ದೀರಿ ಎಂಬುದನ್ನು ಗಮನಿಸಿದ ಜನತಾ ನ್ಯಾಯಾಲಯ ತೀರ್ಪಿನಿಂದಾಗಿ ಅಧಿಕಾರ ಕಳೆದುಕೊಂಡಿದ್ದೀರಿ. ಅದಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬೇಕಿಲ್ಲ’ ಎಂದು ವಾಗ್ದಾಳಿ ನಡೆಸಿದರು. ಪ್ರತಿಕಾಗೋಷ್ಠಿಯುದ್ದಕ್ಕೂ ಕಾರಜೋಳ ಸಾಹೇಬ್ರ ಎಂದೇ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.