ADVERTISEMENT

ಉದ್ಘಾಟನೆಯಾಗದ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 5:57 IST
Last Updated 29 ಆಗಸ್ಟ್ 2024, 5:57 IST
ರಬಕವಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ
ರಬಕವಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಹಳೆಯ ಬಸ್ ನಿಲ್ದಾಣಗಳ ಬದಲು ನೂತನ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇವುಗಳ ಕಾಮಗಾರಿ ಮುಕ್ತಾಯಗೊಂಡರೂ ಇದುವರೆಗೆ ಇವೆರಡೂ ಬಸ್ ನಿಲ್ದಾಣಗಳು ಉದ್ಘಾಟನೆಗೊಂಡಿಲ್ಲ. ಯಾವುದೇ ಮೂಲ ಸೌಕರ್ಯ ಇಲ್ಲ. ಇದರಿಂದ ಪ್ರಯಾಣಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ರಬಕವಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ಪ್ರಯಾಣಿಕರು ಬಸ್ ಬರುವವರೆಗೆ ನಿಂತುಕೊಂಡೇ ಕಾಯಬೇಕಾಗಿದೆ. ಗ್ರಾಮೀಣ ಪ್ರದೇಶಗಳಿಗೆ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್‌ಗಾಗಿ ಗಂಟೆಗಟ್ಟಲೇ ನಿಂತು ಕಾಯಬೇಕಿದೆ. ಆಸನದ ವ್ಯವಸ್ಥೆ ಇಲ್ಲದೇ ಇರುವುದರಿಂದ ಹಲವು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕೆಳಗೆ ಕುಳಿತುಕೊಳ್ಳುತ್ತಿದ್ದಾರೆ. ನೆಲ ಕೂಡ ಸ್ವಚ್ಛವಾಗಿರುವುದಿಲ್ಲ.  ಮಳೆಗಾಲ ಇರುವುದರಂದ ಮಳೆಯ ನೀರು ಬಸ್ ನಿಲ್ದಾಣದ ಒಳಗೆ ಬರುತ್ತಿರುವುದರಿಂದ ಪ್ರಯಾಣಿಕರಿಗೆ ಮತ್ತಷ್ಟು ಸಮಸ್ಯೆ ಎದುರಾಗಿದೆ.

ಹೊಸ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದರೂ, ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. ಇದರಿಂದಾಗಿ ಪ್ರಯಾಣಿಕರು, ರಾತ್ರಿ ವಸತಿಗೆ ಬರುವ ಬಸ್ ಚಾಲಕರು ಮತ್ತು ನಿರ್ವಾಹಕರು ಬಯಲು ಶೌಚಾಲಯವನ್ನೇ ಅವಲಂಬಿಸಬೇಕಿದೆ. ಇಲ್ಲಿಯ ಶೌಚಾಲಯಕ್ಕೆ ಸಿಂಟೆಕ್ಸ್ ಹಚ್ಚಿ ಬಂದ್‌ ಮಾಡಲಾಗಿದೆ.

ADVERTISEMENT

ಇದೇ ಪರಿಸ್ಥಿತಿ ಬನಹಟ್ಟಿ ಬಸ್ ನಿಲ್ದಾಣದಲ್ಲೂ ಇದೆ. ಇಲ್ಲಿಯೂ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳಿಲ್ಲ. ಸರಿಯಾಗಿ ಬಸ್ ನಿಲ್ಲಲೂ ಅವಕಾಶ ಇಲ್ಲದಂತಾಗಿದೆ. ಬಸ್ ನಿಲ್ಧಾಣದ ಕಟ್ಟಡದ ಒಳಗೆ ಹೋಗದಂತೆ ಇಲ್ಲಿ ಪತ್ರಾಸ ತಡೆಗೋಡೆ ಮಾಡಲಾಗಿದೆ. ಪ್ರಯಾಣಿಕರು ಬಿಸಿಲು ಮತ್ತು ಮಳೆಯಲ್ಲೇ ನಿಂತು ಕಾಯಬೇಕಿದೆ. ಬನಹಟ್ಟಿ ಬಸ್ ನಿಲ್ದಾಣದಲ್ಲಿಯ ಆವರಣದಲ್ಲಿ ಇನ್ನೂ ಮರಳು ಸಹ ಹಾಗೆಯೇ ಬಿದ್ದುಕೊಂಡಿದೆ. ಇದಮ್ಮು ಕೂಡ ಸ್ವಚ್ಛ ಮಾಡಿಲ್ಲ. ಅಪಾರ ಪ್ರಮಾಣದ ಕಸ ಕೂಡ ಸಂಗ್ರಹವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡಿ ಆದಷ್ಟು ಬೇಗ ಈ ಎರಡೂ ಬಸ್ ನಿಲ್ದಾಣಗಳನ್ನು ಉದ್ಘಾಟಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರಾದ ವಿಕಾಸ ಹೂಗಾರ, ಶಿವಾನಂದ ಗಾಯಕವಾಡ, ಗೌರಿ ಮಿಳ್ಳಿ, ಗೋಪಾಲ ಭಟ್ಟಡ, ಅಮುಲ ಬದಾಮಿಕರ, ಶಂಭು ಉಕ್ಕಲ, ಅವಿನಾಶ ಹಟ್ಟಿ, ಅಭಿಷೇಕ ಮಠದ ಆಗ್ರಹಿಸಿದ್ದಾರೆ.

ರಬಕವಿ ನಗರದ ಬಸ್ ನಿಲ್ದಾಣದಲ್ಲಿ ಶೌಚಾಲಯ ಕಟ್ಟಡವನ್ನು ಇನ್ನೂ ಬಳಕೆಗೆ ನೀಡಿಲ್ಲ
ಈಗಾಗಲೇ ಎರಡೂ ಬಸ್ ನಿಲ್ದಾಣಗಳ ಕಾಮಗಾರಿ ಮುಕ್ತಾಯಗೊಂಡಿದೆ. ಇವುಗಳನ್ನು ಉದ್ಘಾಟಿಸುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆಯಲಾಗಿದೆ.
–ಸಿದ್ದು ಸವದಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.