ರಬಕವಿ ಬನಹಟ್ಟಿ: ಇದೇ 19 ರಿಂದ 21 ರವರೆಗೆ ರಬಕವಿಯ ಮಲ್ಲಿಕಾರ್ಜುನ ದೇವರ ಐತಿಹಾಸಿಕ ಜಾತ್ರೆ ಮೂರು ದಿನಗಳ ಕಾಲ ನಡೆಯಲಿದೆ.
ರಬಕವಿಯ ಜಾತ್ರೆಯ ವಿಶೇಷತೆ ಎಂದರೆ ಇದು ಮಲ್ಲಿಕಾರ್ಜುನ ದೇವರ ಜಾತ್ರೆಯಾದರೂ ಮಹಾದೇವರ ದೇವಸ್ಥಾನವನ್ನು ಶೃಂಗರಿಸಲಾಗುತ್ತದೆ. ನಂತರ ಸೋಮವಾರ ಸಂಜೆ ನಡೆಯುವ ರಥೋತ್ಸವದಲ್ಲಿ ಮಹಾಲಿಂಗಪುರದ ಮಹಾಲಿಂಗೇಶ್ವರ ಮತ್ತು ಮಲ್ಲಿಕಾರ್ಜುನ ದೇವರ ಬೆಳ್ಳಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಸಮಿತಿಯವರು ಜಾತ್ರೆಯನ್ನು ನಡೆಸುತ್ತಾರೆ.
ಜಾತ್ರೆಯ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ ಜಿಲ್ಲೆಗಳ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶಗಳ ಐದು ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಬಂದು ಶಂಕರಲಿಂಗ ದೇವಸ್ಥಾನದಲ್ಲಿ ಪ್ರತಿಷ‍್ಠಾಪಿಸಲಾಗುತ್ತದೆ. ಮಧ್ಯಾಹ್ನ ಶಂಕರಲಿಂಗ ದೇವಸ್ಥಾನದಲ್ಲಿ ಸಂಬಾಳ ಮತ್ತು ಕರಡಿ ವಾದನ ನಡೆಯುತ್ತದೆ. ಮಹಾಲಿಂಗಪುರದಿಂದ ಮಹಾಲಿಂಗೇಶ್ವರರ ಪಲ್ಲಕ್ಕಿ ಸೇವೆ ಬಂದ ನಂತರ ರಥೋತ್ಸವ ನಡೆಯುತ್ತಿದೆ. ನಂತರ ಸಂಜೆ ಹೂ ಮಾಲೆ, ಮತ್ತು ವಿದ್ಯುತ್ ದೀಪಗಳಿಂದ ಶೃಂಗಾರಗೊಂಡ ರಥೋತ್ಸವ ಸಾವಿರಾರು ಸಂಖ್ಯೆಯ ಭಕ್ತರ ಮಧ್ಯದಲ್ಲಿ ನಡೆಯುತ್ತದೆ.
ಮಂಗಳವಾರ ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಏಳರವರೆಗೆ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳು ನಡೆಯುತ್ತವೆ. ಬುಧವಾರ ಕಳಸೋತ್ಸವದೊಂದಿಗೆ ಜಾತ್ರೆ ಮುಕ್ತಾಯವಾಗುತ್ತದೆ.
ರಬಕವಿಯ ಸ್ವಾತಂತ್ರ್ಯ ಪೂರ್ವದಲ್ಲಿ ಸಾಂಗ್ಲಿ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿತ್ತು. ಸಾಂಗ್ಲಿ ಸಂಸ್ಥಾನದ ಮಹಾರಾಜರು ಜಾತ್ರೆಗೆ ಆಗಮಿಸಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆದುಕೊಂಡು ಹೋಗುತ್ತಿದ್ದರು.
ದಿ. 08. 04. 1956 ರಲ್ಲಿ ಅಂದಿನ ಪ್ರಧಾನಿ ನೆಹರೂ ಮತ್ತು ಇಂದಿರಾ ಗಾಂಧಿ ರಬಕವಿ ನಗರಕ್ಕೆ ಆಗಮಿಸಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆದುಕೊಂಡು ಇಲ್ಲಿನ ಶಂಕರಲಿಂಗ ದೇವಸ್ಥಾನದ ಮುಂಭಾಗದಲ್ಲಿ ಭಾಷಣ ಮಾಡಿದ್ದರು.
ಅಂದಾಜು ಮೂರುವರೆ ನೂರುಗಳ ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿ ಮಲ್ಲಿಕಾರ್ಜುನ ದೇವರ ಜಾತ್ರೆ ಈ ಭಾಗದಲ್ಲಿ ನಡೆಯುವ ಪ್ರಥಮ ಜಾತ್ರೆಯಾಗಿದೆ. ಇಲ್ಲಿಂದ ಮುಂದೆ ಎರಡು ತಿಂಗಳ ಅವಧಿಯಲ್ಲಿ ಸುತ್ತ ಮುತ್ತಲಿನ ನಗರ ಮತ್ಲು ಗ್ರಾಮೀಣ ಪ್ರದೇಶಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ದೇವರುಗಳ ಜಾತ್ರೆಗಳು ನಡೆಯುತ್ತವೆ.
ಸತತವಾಗಿ ಮೂರುವರೆ ನೂರು ವರ್ಷಗಳಿಂದ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ನಡೆಸಿಕೊಂಡು ಬಂದಿರುವುದು ವಿಶೇಷವಾಗಿದೆ.
ಬಾಲಚಂದ್ರ ಉಮದಿ ಅಣ್ಣನವರು, ಅಧ್ಯಕ್ಷರು ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಸಮಿತಿ ರಬಕವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.