ಬಾಗಲಕೋಟೆ: ಹಿಂಗಾರು ಜೋಳ ಬಿತ್ತನೆ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಬಿತ್ತನೆಗೆ ಅಡ್ಡಿಯಾಗಿದೆ.
ಹಿಂಗಾರು ಹಂಗಾಮಿನಲ್ಲಿ 3.09 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯ ಗುರಿ ಹೊಂದಲಾಗಿದೆ. ಆದರೆ, ಇಲ್ಲಿಯವರೆಗೆ 60 ಸಾವಿರ ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ.
ಜೋಳ ಪ್ರಮುಖ ಬೆಳೆಯಾಗಿದ್ದು, 98 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 9,400 ಹೆಕ್ಟೇರ್ ಪ್ರದೇಶದಷ್ಟು ಮಾತ್ರ ಬಿತ್ತನೆಯಾಗಿದೆ.
24,400 ಹೆಕ್ಟೇರ್ ಗೋವಿನ ಜೋಳ ಬಿತ್ತನೆ ಗುರಿಯಲ್ಲಿ 900 ಹೆಕ್ಟೇರ್, 29 ಸಾವಿರ ಹೆಕ್ಟೇರ್ ಗೋಧಿ ಬಿತ್ತನೆಯಲ್ಲಿ 600 ಹೆಕ್ಟೇರ್, 1,09 ಲಕ್ಷ ಕಡಲೆ ಬಿತ್ತನೆಯಲ್ಲಿ 9,790 ಹೆಕ್ಟೇರ್ ಬಿತ್ತನೆಯಾಗಿದೆ. ಸೂರ್ಯಕಾಂತಿ, ಶೇಂಗಾ ಬಿತ್ತನೆಯೂ ಆಗಬೇಕಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಯಂತೆ 13.6 ಸೆ.ಮೀ. ಮಳೆಯಾಗಬೇಕಿತ್ತು. ಆದರೆ, 67 ಸೆ.ಮೀ. ನಷ್ಟು ಮಾತ್ರ ಮಳೆಯಾಗಿದೆ. ಮಳೆಯ ಕೊರತೆ ಎದುರಿಸಿದ್ದರಿಂದ ಬಿತ್ತನೆಗೆ ಮುಂದಾಗಿರಲಿಲ್ಲ.
ಅಕ್ಟೋಬರ್ ತಿಂಗಳದ 15 ದಿನಗಳು ಮುಗಿಯುವ ವೇಳೆಗೆ ವಾಡಿಕೆಯಷ್ಟು ಮಳೆಯಾಗಿದೆ. ಆದರೆ, ಸತತವಾಗಿ ಮಳೆಯಾಗುತ್ತಿರುವುದರಿಂದ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನಷ್ಟು ವಿಳಂಬವಾದರೆ ಜೋಳ ಬಿತ್ತನೆ ಸಾಧ್ಯವಾಗುವುದಿಲ್ಲ.
‘ಜೋಳ ಬಿತ್ತನೆಗೆ ಸಜ್ಜು ಮಾಡಿಕೊಳ್ಳಲಾಗಿದೆ. ಆದರೆ, ಭೂಮಿಯಲ್ಲಿ ತೇವಾಂಶ ಜಾಸ್ತಿ ಇದೆ. ಮಳೆ ನಿಂತರೆ ಬಿತ್ತನೆ ಮಾಡಬಹುದಾಗಿದೆ. ಇಲ್ಲದಿದ್ದರೆ, ತೊಂದರೆಯಾಗುತ್ತದೆ’ ಎಂದು ಶೀಗಿಕೇರಿ ರೈತ ಮಲ್ಲಣ್ಣ ಹೇಳಿದರು.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವು ದರಿಂದ ಮುಂದಿನ ಮೂರ್ನಾಲ್ಕು ದಿನ ಸಾಧಾರಣದಿಂದ ಜೋರಾದ ಮಳೆಯಾಗುವ ಸಾಧ್ಯತೆ ಇದೆಬಸವರಾಜ ನಾಗಲೀಕರ,ಹವಾಮಾನ ತಜ್ಞ, ಕೃಷಿ ವಿಜ್ಞಾನ ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.