ಬಾಗಲಕೋಟೆ: ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಕೇವಲ ಶೇ11 ರಷ್ಟು ಹೆಚ್ಚು ಮಳೆಯಾಗಿದೆ. ಆದರೂ, ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ. ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯಲ್ಲಿ ಆಗುತ್ತಿರುವ ಮಳೆಯ ಪರಿಣಾಮ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
ಜುಲೈ ತಿಂಗಳಿನಲ್ಲಿ 6.1 ಸೆ.ಮೀ. ಮಳೆಯಾಗಬೇಕಿತ್ತು. 6.8 ಸೆ.ಮೀ. ಮಳೆಯಾಗಿದೆ. ಅದರಲ್ಲೂ ಪ್ರವಾಹಕ್ಕೆ ತುತ್ತಾಗಿರುವ ಮುಧೋಳ ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ಉಳಿದ ತಾಲ್ಲೂಕುಗಳಲ್ಲಿಯೂ ಹೆಚ್ಚಿನ ಪ್ರಮಾಣದ ಮಳೆಯಾಗಿಲ್ಲ.
ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ 68ರಷ್ಟು ಹೆಚ್ಚು ಮಳೆಯಾಗಿತ್ತು. ಆದರೂ, ಯಾವುದೇ ಪ್ರವಾಹ ಪರಿಸ್ಥಿತಿ ಇರಲಿಲ್ಲ. ಬಿತ್ತನೆ ಕಾರ್ಯವನ್ನು ರೈತರು ಜೋರಾಗಿಯೇ ಮಾಡಿದ್ದರು. ಬೆಳೆಗಳೂ ಬೆಳೆದು ನಿಂತಿದ್ದವು.
ಜುಲೈ ತಿಂಗಳಿನಲ್ಲಿ ಕೃಷ್ಣಾ ಉಗಮ ಸ್ಥಾನ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದೆ. ಪರಿಣಾಮ ಮಹಾರಾಷ್ಟ್ರದಿಂದ 2.41 ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿದು ಬರುತ್ತಿದೆ. ಜತೆಗೆ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಕೃಷ್ಣಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ.
ನದಿ ತೀರದ 203 ಗ್ರಾಮಗಳನ್ನು ಪ್ರವಾಹ ಪೀಡಿತ ಎಂದು ಗುರುತಿಸಲಾಗಿದೆ. ಅದರಲ್ಲಿ ಈಗ 20ಕ್ಕೂ ಹೆಚ್ಚು ಗ್ರಾಮಗಳಿಗೆ ಜಲ ಸಂಕಷ್ಟ ಎದುರಾಗಿದೆ. ಸುಗಮವಾಗಿ ಸಾಗುತ್ತಿದ್ದ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಪ್ರವಾಹದಿಂದಾಗಿ ಜಿಲ್ಲೆಯ ನದಿ ತೀರಗಳ ಜನರು ಜುಲೈ ಹಾಗೂ ಆಗಸ್ಟ್ ತಿಂಗಳನ್ನು ಪ್ರವಾಹದ ಭೀತಿಯಲ್ಲಿಯೇ ಕಳೆಯಬೇಕಾಗಿದೆ. ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಲವೆಡೆ ಮನೆಗಳನ್ನು ನಿರ್ಮಿಸಲಾಗಿದೆ. ಮನೆ ಸಣ್ಣದು, ಪೂರ್ಣ ಪ್ರಮಾಣದ ಸ್ಥಳಾಂತರವಾಗಿಲ್ಲ. ಹೊಲಗಳಿಗೆ ದೂರವಾಗುತ್ತದೆ ಎಂಬುದು ಸೇರಿದಂತೆ ವಿವಿಧ ಕಾರಣಗಳಿಗೆ ಜನರು ಅಲ್ಲಿಗೆ ಸ್ಥಳಾಂತರವಾಗಿಲ್ಲ.
ನದಿ ತೀರದ ಜನರನ್ನು ಸ್ಥಳಾಂತರಿಸುವ ಕಾರ್ಯ ಮಾಡಬೇಕಾಗಿದ್ದ ಆಡಳಿತ ವ್ಯವಸ್ಥೆಯೂ ವಿಫಲವಾಗಿದೆ. ಪರಿಣಾಮ ನೀರು ನುಗ್ಗುವುದು, ಹತ್ತಾರು ದಿನಗಳ ಕಾಲ ಜನರು ಸಂಕಷ್ಟ ಅನುಭವಿಸುವುದು ಸಾಮಾನ್ಯ ಎನ್ನುವಂತಾಗಿದೆ.
ನದಿ ತೀರದ ಹೊಲಗಳಿಗೂ ನೀರು ನುಗ್ಗುವುದರಿಂದ ಬೆಳೆ ಹಾನಿಯೂ ಸಂಭವಿಸುತ್ತಿದೆ. ಪ್ರವಾಹ ಪರಿಸ್ಥಿತಿ ಶಾಶ್ವತವಾಗಿ ನಿಭಾಯಿಸಲು ಯೋಜನೆಯೊಂದನ್ನು ರೂಪಿಸಬೇಕಿದೆ.
ಮಿರ್ಜಿ ಗ್ರಾಮವನ್ನೂ ಸಂಫೂರ್ಣವಾಗಿ ಸ್ಥಳಾಂತರಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಪರಿಣಾಮ ಪ್ರವಾಹ ಸಂಕಷ್ಟ ಅನುಭವಿಸುವಂತಾಗಿದೆಗೀತಾ ನ್ಯಾಮಗೌಡರ ಮಿರ್ಜಿ ಗ್ರಾಮಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.