ADVERTISEMENT

ರಾಂಪುರ | ದುರಸ್ತಿ ಕಾಣದ ಬೇವೂರ-ಬೋಡನಾಯ್ಕದಿನ್ನಿ ರಸ್ತೆ

ಪ್ರಕಾಶ ಬಾಳಕ್ಕನವರ
Published 15 ಜೂನ್ 2024, 5:38 IST
Last Updated 15 ಜೂನ್ 2024, 5:38 IST
ಬೇವೂರ-ಬೋಡನಾಯ್ಕದಿನ್ನಿ ರಸ್ತೆ ಮಳೆಯಿಂದಾಗಿ ಸಂಪೂರ್ಣ ಕೆಸರುಮಯವಾಗಿದೆ
ಬೇವೂರ-ಬೋಡನಾಯ್ಕದಿನ್ನಿ ರಸ್ತೆ ಮಳೆಯಿಂದಾಗಿ ಸಂಪೂರ್ಣ ಕೆಸರುಮಯವಾಗಿದೆ    

ರಾಂಪುರ: ಕಳೆದ 2-3 ವರ್ಷಗಳಿಂದ ದುರಸ್ತಿ ಕಾಣದ ಸಮೀಪದ ಬೇವೂರ-ಬೋಡನಾಯ್ಕದಿನ್ನಿ ರಸ್ತೆ ಈಗ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಆಲಮಟ್ಟಿ, ವಿಜಯಪುರ, ಮುದ್ದೇಬಿಹಾಳಕ್ಕೆ ತೆರಳಲು ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಬೇವೂರಿನಿಂದ ಬೋಡನಾಯ್ಕದಿನ್ನಿ ಕ್ರಾಸ್‌ವರೆಗೆ ಅಂದಾಜು 3.60 ಕಿ.ಮೀ.ನಷ್ಟು ರಸ್ತೆಯಲ್ಲಿ ಈಗಾಗಲೇ ದುರಸ್ತಿ ಹಾಗೂ ಡಾಂಬರೀಕರಣ ಕಾರ್ಯ ಮುಗಿದಿದೆ. ಮಧ್ಯದಲ್ಲಿ 1 ಕಿ.ಮೀ.ನಷ್ಟು ರಸ್ತೆ ಮಾತ್ರ ದುರಸ್ತಿಯಾಗಿಲ್ಲ.

ರೈತರೊಬ್ಬರು ಪರಿಹಾರದ ವಿಷಯವಾಗಿ ನ್ಯಾಯಾಲಯದ ಮೆಟ್ಟಿಲು ಏರಿರುವುದರಿಂದ ಈ ರಸ್ತೆ ದುರಸ್ತಿಯಾಗದೇ ಉಳಿದಿದ್ದು, ಮಳೆಯಾದರೆ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿ ಪರದಾಡುವಂತಾಗುತ್ತದೆ.

ADVERTISEMENT

ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ದೊಡ್ಡ ವಾಹನಗಳನ್ನು ಬಿಟ್ಟರೆ ಮೋಟರ್‌ ಸೈಕಲ್, ಚಕ್ಕಡಿಗಳ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯಲ್ಲಿಯ ಹಳ್ಳಕ್ಕೆ ಜಮೀನುಗಳಲ್ಲಿಯ ಮಣ್ಣು ಬಂದು ನಿಂತು ಎಲ್ಲವೂ ಕೆಸರಿನಿಂದ ಕೂಡಿ, ಪಾದಚಾರಿಗಳು ಸಹ ಎದ್ದು ಬಿದ್ದು ಸಾಗಬೇಕಾದ ಸ್ಥಿತಿಯಿದೆ.

ಕೋರ್ಟ್‌ ವ್ಯಾಜ್ಯ ಇತ್ಯರ್ಥವಾಗದೇ ಇರುವುದರಿಂದ ತನಗೆ ಈ ರಸ್ತೆ ರಿಪೇರಿ, ಡಾಂಬರೀಕರಣ ಮಾಡುವುದು ಸಾಧ್ಯವಿಲ್ಲ ಎಂದು ಗುತ್ತಿಗೆದಾರ ಲೋಕೋಪಯೋಗಿ ಇಲಾಖೆಗೆ ಬರೆದು ಕೊಟ್ಟಿರುವುದರಿಂದ ಈಗ ಇಲಾಖೆ ಅನಿವಾರ್ಯವಾಗಿ ಗುತ್ತಿಗೆ ರದ್ದುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದೆ. ಸರ್ಕಾರ ಗುತ್ತಿಗೆ ರದ್ದುಗೊಳಿಸಿದ ನಂತರ ಮತ್ತೆ ಹೊಸ ಟೆಂಡರ್ ಕರೆಯಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದೆಲ್ಲಕ್ಕೂ ಸಮಯ ಬೇಕಾಗುತ್ತದೆ. ಆದರೆ ರಸ್ತೆ ಹದಗೆಟ್ಟು ಹೋಗಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವುದನ್ನು ತಪ್ಪಿಸಲು ಉಪಾಯ ಕಂಡುಕೊಳ್ಳಬೇಕು ಎಂದು ಎರಡೂ ಗ್ರಾಮಗಳ ಜನ ಹಾಗೂ ಪ್ರಯಾಣಿಕರು ಹೇಳುತ್ತಾರೆ.

ಹಾಕಿದ ಗರಸು ಮಾಯ: ರಸ್ತೆ ಹದಗೆಟ್ಟಿರುವುದನ್ನು ಮನಗಂಡ ಲೋಕೋಪಯೋಗಿ ಇಲಾಖೆ ವಾರದ ಹಿಂದಷ್ಟೇ ಒಂದಿಷ್ಟು ಕಲ್ಲು ಮಿಶ್ರಿತ ಗರಸು ಹಾಕಿತ್ತು. ವಿಪರೀತವಾಗಿ ಬಿದ್ದ ಮಳೆಗೆ ಅದೆಲ್ಲವೂ ಹಳ್ಳಕ್ಕೆ ಹರಿದು ಬಂದು ರಾಡಿಯಾಗಿ ನಿಂತು ರಸ್ತೆಗೆ ಕಾಲಿಡಲು ಸಹ ಆಗದ ಸ್ಥಿತಿಗೆ ಬಂದಿದೆ.

ಮಳೆಯಿಂದಾಗಿ ಸಂಪೂರ್ಣ ಕೆಸರುಮಯವಾಗಿರುವ ಬೇವೂರ-ಬೋಡನಾಯ್ಕದಿನ್ನಿ ರಸ್ತೆ
ಬೇಗನೇ ರಸ್ತೆ ದುರಸ್ತಿ ಮಾಡಿಸಿ
ಎರಡು ವರ್ಷಗಳಿಂದಲೂ 1 ಕಿ.ಮೀನಷ್ಟು ರಸ್ತೆ ದುರಸ್ತಿ ಕಾಣದೇ ಇರುವುದು ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿದೆ. ಇಲಾಖೆಯವರು ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಿಸಿ ಜನರು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಮಲ್ಲಿಕಾರ್ಜುನ ಬೋಡನಾಯ್ಕದಿನ್ನಿ ಗ್ರಾಮ ಹೊಸದಾಗಿ ಟೆಂಡರ್‌ ಕರೆಯಬೇಕಿದೆ ರೈತರೊಬ್ಬರು ಪರಿಹಾರದ ವಿಷಯಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹೋಗಿರುವುದರಿಂದ 1 ಕಿ.ಮೀನಷ್ಟು ರಸ್ತೆ ದುರಸ್ತಿ ಆಗಿಲ್ಲ. ಜೊತೆಗೆ ಹಿಂದಿನ ಗುತ್ತಿಗೆದಾರ ಗುತ್ತಿಗೆ ರದ್ದುಗೊಳಿಸುವಂತೆ ಕೋರಿದ್ದಾರೆ. ಆ ಪ್ರಕ್ರಿಯೆಗೆ ಸರ್ಕಾರದ ಅನುಮತಿ ಕೇಳಿದ್ದು ಅದು ಬಂದ ನಂತರ ಮತ್ತೆ ಈ ರಸ್ತೆ ದುರಸ್ತಿಗೆ ಹೊಸದಾಗಿ ಟೆಂಡರ್ ಕರೆಯಲಾಗುವುದು. ನಾರಾಯಣ ಕುಲಕರ್ಣಿ ಎಇಇ ಪಿಡಬ್ಲುಡಿ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.