ಮಹಾಲಿಂಗಪುರ: ಪಟ್ಟಣದ ಬುದ್ನಿ ಪಿ.ಡಿ. ಬಡಾವಣೆಯ ಬಾವಿಯಲ್ಲಿರುವ ವಿಠ್ಠಲ-ರುಕ್ಮಿಣಿ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಗೌರಿ ಹುಣ್ಣಿಮೆ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ರಾತ್ರಿ ಸಂಭ್ರಮದ ರಥೋತ್ಸವ ನಡೆಯಿತು.
ರಥೋತ್ಸವವು ವಿಠ್ಠಲ-ರುಕ್ಮಿಣಿ ದೇವಸ್ಥಾನದಿಂದ ಬುದ್ನಿ ಪಿ.ಡಿ. ಬಡಾವಣೆಯ ಹನುಮಾನ ದೇವಸ್ಥಾನದವರೆಗೆ ಅದ್ದೂರಿಯಾಗಿ ನಡೆಯಿತು. ಕರಡಿ ಕಲಾವಿದರ ಕರಡಿಮಜಲು, ಮಹಾಲಿಂಗೇಶ್ವರ ಮಠದ ಗೋವು, ನಂದಿಕೋಲು ಉತ್ಸವಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ರಥಕ್ಕೆ ಹೂವು, ಹಣ್ಣು, ಉತ್ತತ್ತಿ, ಬೆಂಡು, ಬೆತ್ತಾಸ ಹಾರಿಸಿ ‘ಜಯ ಜಯ ವಿಠ್ಠಲ ಪಾಂಡುರಂಗ ವಿಠ್ಠಲ’ ಜಯಘೋಷಗಳನ್ನು ಮೊಳಗಿಸಿ ರಥವನ್ನು ಎಳೆದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಮಹಾಲಿಂಗಪ್ಪಗೌಡ ಪಾಟೀಲ, ಚೇಬಪ್ಪ ಯಾದವಾಡ, ಮಲ್ಲಪ್ಪ ಅಂಬಣ್ಣಗೋಳ, ಸದಾಶಿವ ಶೇಗುಣಸಿ, ಕುಮಾರ ಪವಾರ, ರಾಜು ಮುದಕಪ್ಪಗೋಳ, ಮೌನೇಶ ಬಡಿಗೇರ, ಶಂಕರಗೌಡ ಪಾಟೀಲ, ವಿಠ್ಠಲಗೌಡ ಪಾಟೀಲ, ರಾಮಣ್ಣ ಸಂಶಿ, ಶ್ರೀಶೈಲಪ್ಪ ರೊಡ್ಡನ್ನವರ, ಹಣಮಂತ ಬಡಿಗೇರ, ನಾರಾಯಣಗೌಡ ಪಾಟೀಲ ಇದ್ದರು.
ಜಾತ್ರೆಯ ಪ್ರಯುಕ್ತ ಸೋಮವಾರ ಬೆಳಿಗ್ಗೆ ಕಾಕಡಾರತಿ, ಶ್ರೀಹರಿ ವಿಠ್ಠಲನ ಸೋಹಳಾ ದಿಂಡಿ ನಗರ ಪ್ರದಕ್ಷಣೆ ಹಾಗೂ ಭಾರುಡ ಕಾರ್ಯಕ್ರಮಗಳ ಮೆರವಣಿಗೆ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ವಿಠ್ಠಲ-ರುಕ್ಮಿಣಿ ಅಖಂಡ ಹರಿನಾಮ ಸಪ್ತಾಹದ ಹಿನ್ನೆಲೆ ಕಾಕಡಾರತಿ, ಭಜನೆ, ಕೀರ್ತನೆ, ಹರಿಪಾಠ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.