ರಾಂಪುರ: ತಗಡಿನ ಶೆಡ್‌ನಲ್ಲೇ ವಾಸ, ಸುತ್ತಲಿನ ಜಾಗಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳು, ಹಾವು, ಚೇಳು ಭಯದಲ್ಲೇ ದಿನದೂಡುವ ಸ್ಥಿತಿ, ವಿದ್ಯುತ್, ನೀರು, ಶೌಚಾಲಯಕ್ಕಾಗಿ ನಿತ್ಯವೂ ತಪ್ಪದ ಪರದಾಟ..
ಬಾಗಲಕೋಟೆ ತಾಲ್ಲೂಕಿನ ಬೊಮ್ಮಣಗಿ ಗ್ರಾಮದ ಪುನರ್‌ವಸತಿ ಕೇಂದ್ರದಲ್ಲಿರುವ ಜನರ ಅಸಹನೀಯ ಬದುಕಿನ ಚಿತ್ರಣ ಇದು. ಮುಳುಗಡೆಯಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಪುನರ್ವಸತಿಗೊಂಡಿರುವ ಜಿಲ್ಲೆಯ ಬಹುತೇಕ ಹಳ್ಳಿಗಳ ಸ್ಥಿತಿ ಇದೇ ರೀತಿ ಇದೆ.
ಮುಳುಗಡೆಯಾಗಿ 15 ವರ್ಷಗಳ ಹಿಂದೆಯೇ ಬೊಮ್ಮಣಗಿ ಗ್ರಾಮ ಪುನರವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದೆ. ಆದರೆ, ಈವರೆಗೂ ಅಲ್ಲಿನ ಜನರಿಗೆ ಮೂಲ ಸೌಲಭ್ಯಗಳು ಮರೀಚಿಕೆ ಆಗಿವೆ. ಗ್ರಾಮದ ಶೇ 90ರಷ್ಟು ಕುಟುಂಬಗಳು ಪುನರ್ವಸತಿ ಪ್ರದೇಶಕ್ಕೆ ಸ್ಥಳಾಂತರಗೊಂಡು ಮನೆ ಕಟ್ಟಿಕೊಳ್ಳಲು ಸಾಧ್ಯವಾಗದೆ ಅಂದು ಸರ್ಕಾರ ನೀಡಿದ ತಗಡಿನ ಶೆಡ್‌ನಲ್ಲಿಯೇ ಬದುಕು ನಡೆಸುತ್ತಿವೆ.
ಪುನರ್ವಸತಿ ಬಳಿಕ ಕಲ್ಪಿಸಿದ್ದ ಶೌಚಾಲಯಗಳು ಹಾಳಾಗಿದ್ದು, ರಸ್ತೆಗಳೇ ಬಹಿರ್ದೆಸೆ ತಾಣಗಳಾಗಿವೆ. ಚರಂಡಿಗಳು ಹೂಳು ತುಂಬಿಕೊಂಡು ಹಾಳಾಗಿವೆ.
‘ಗ್ರಾಮದ 374 ಕುಟುಂಬಗಳು ಹಳೇ ಊರಿನಿಂದ ಸ್ಥಳಾಂತರವಾಗಬೇಕಿದ್ದು, ಕೆಲವರು ಇನ್ನೂ ಅಲ್ಲೇ ವಾಸ ಮಾಡುತ್ತಿದ್ದಾರೆ. ಗ್ರಾಮ ಮುಳುಗಡೆ ಆದ ಬಳಿಕ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಧನ ನೀಡಿದ್ದು, ಮನೆ ಕಟ್ಟಿಕೊಳ್ಳಲು ಆ ಹಣ ಸಾಲುವುದಿಲ್ಲ. ಬಡತನದಿಂದ ಜೀವನ ನಿರ್ವಹಣೆಯೇ ಸವಾಲಾಗಿದ್ದು, ಇನ್ನೂ ಹೊಸ ಮನೆ ಕಟ್ಟಿಕೊಳ್ಳುವುದು ಕನಸಿನ ಮಾತಾಗಿದೆ. ಹೀಗಾಗಿ ತಗಡಿನ ಶೆಡ್‌ನಲ್ಲಿಯೇ ವಾಸಿಸುತ್ತಿದ್ದೇವೆ’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.
ಈವರೆಗೆ 512 ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಹೇಳುವ ಪುನರ್ವಸತಿ ಇಲಾಖೆ ಅಧಿಕಾರಿಗಳು, ತಾಂತ್ರಿಕ ಕಾರಣಗಳಿಂದ ಉಳಿದ ಜನರಿಗೆ ಹಕ್ಕುಪತ್ರ ನೀಡಿಲ್ಲ ಎನ್ನುತ್ತಾರೆ. ಆದರೆ ಇದನ್ನು ಒಪ್ಪದ ಸಂತ್ರಸ್ಥರು, ವಿನಾಕಾರಣ ನಮಗೆ ಹಕ್ಕು ಪತ್ರ ನೀಡುತ್ತಿಲ್ಲ. ಹಣಕ್ಕಾಗಿ ಪೀಡಿಸುತ್ತಾರೆ ಎಂದು ದೂರುತ್ತಾರೆ. ಇನ್ನು ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಜಮೀನು ನೀಡಿದ ಕುಟುಂಬಕ್ಕೂ ನಿವೇಶನ ಸಿಕ್ಕಿಲ್ಲ ಎನ್ನುವುದು ಗ್ರಾಮಸ್ಥರ ದೂರು.
ಗ್ರಾಪಂಗೆ ಹಸ್ತಾಂತರ:
ಬೊಮ್ಮಣಗಿ ಪುನರ್ವಸತಿ ಕೇಂದ್ರವನ್ನು 2017ರಲ್ಲಿ ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯಿತಿಗೆ ಸೇರಿಸಲಾಗಿದೆ. ಆದರೆ, ಇಲ್ಲಿಗೆ ಕನಿಷ್ಠ ಸೌಲಭ್ಯಗಳನ್ನೂ ಕಲ್ಪಿಸಲು ಗ್ರಾಮ ಪಂಚಾಯಿತಿಯು ವಿಫಲವಾಗಿದೆ.
‘ಅನುದಾನಕ್ಕಾಗಿ ಸರ್ಕಾರಕ್ಕೆ ಪತ್ರ’
ಪುನರ್ವಸತಿ ಕೇಂದ್ರಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಸಚಿವರ ಸೂಚನೆಯಂತೆ ಅಲ್ಲಿನ ಅಗತ್ಯತೆಯ ಬಗ್ಗೆ ಪಟ್ಟಿ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದಕ್ಕೆ ಅನುಮೋದನೆ ದೊರೆತು ಅನುದಾನ ಬಂದರೆ ಪುನರ್ವಸತಿ ಕೇಂದ್ರಗಳಲ್ಲಿ ಚರಂಡಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳುತ್ತಾರೆ ಪುನರ್ವಸತಿ ಇಲಾಖೆಯ ಸಹಾಯಕ ಎಂಜಿನಿಯರ್ ಎಸ್.ಎಲ್. ಬಾಯಗೊಂಡ.
ಇಲ್ಲಿಗೆ ಬಂದು 15 ವರ್ಷ ಆಗೈತಿ. ನಮಗ ಮನಿ ಕಟ್ಟಿಕೊಳ್ಳಾಗ ಜಾಗ ಕೊಟ್ಟಿಲ್ಲ. ಇಲ್ಲಿ ಹಾವು ಚೇಳಿನ ಅಂಜಿಕಿಯೊಳಗ ಮಕ್ಕಳೊಂದಿಗೆ ಶೆಡ್ಡಿನ್ಯಾಗ ಜೀವನ ನಡಿಸಿದೀವಿ. ನಮ್ಮ ಗೋಳ ಯಾರೂ ಕೇಳೋರಿಲ್ಲ.ಹನಮವ್ವ, ಸಂತ್ರಸ್ತೆ
ಪುನರ್‌ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡು ಹಲವು ವರ್ಷವಾದರೂ ಈವರೆಗೂ ಮನೆ ಕಟ್ಟಿಕೊಳ್ಳಲು ಜಾಗ ಕಲ್ಪಿಸಿಲ್ಲ. ಜಾಗ ಕೇಳಿದರೆ ಅಧಿಕಾರಿಗಳು ಲಂಚ ಕೇಳುತ್ತಾರೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ತಿರಕಪ್ಪ ಹಡಪದ, ಸಂತ್ರಸ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.