ಗುಳೇದಗುಡ್ಡ: ‘ಶರಣ ಧರ್ಮದಲ್ಲಿ ಭೇದಭಾವವವಿಲ್ಲ. ಶರಣರಾದವರಲ್ಲಿ ಕೆಲವರು ಗ್ರಹಸ್ಥಾಶ್ರಮದವರಾಗಿದ್ದಾರೆ. ಇಲ್ಲಿ ಮದುವೆ, ಮಕ್ಕಳಾದವರಿಗೆ ಮಾತ್ರ ಮುಕ್ತಿ ಎಂದು ಹೇಳುತ್ತಾರೆ. ಆದರೆ, ಮಕ್ಕಳಾಗದಿದ್ದವರಿಗೆ, ಸನ್ಯಾಸಿಯಾದವರಿಗೆ ಮುಕ್ತಿ ಇಲ್ಲವಾ? ಪ್ರಪಂಚದಲ್ಲಿದ್ದು ಪಾರಮಾರ್ಥ ಕಂಡವರಿಗೆ ಮುಕ್ತಿ ಸಾಧ್ಯವಾಗುತ್ತದೆ’ ಎಂದು ನಿಜಗುಣಪ್ರಭು ತೋಂಟದಾರ್ಯ ಶ್ರೀ ಹೇಳಿದರು.
ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆಯ ಅಂಗವಾಗಿ ಏರ್ಪಡಿಸಿರುವ ಮಾಸಿಕ ಪ್ರವಚನದಲ್ಲಿ ಗುರುವಾರ ಪ್ರವಚನ ನೀಡಿದ ಅವರು, ‘ಮನುಷ್ಯ ಸಾವಿಗೆ ಹೆದರುತ್ತಾನೆ, ಸಾವು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಅಧ್ಯಾತ್ಮಿಕ ಚಿಂತನೆ ಮಾಡಿ ದೈವತ್ವ ಕಾಣಬೇಕು. ಅದಕ್ಕೆ ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂದು ದಾಸಿಮಯ್ಯ ಹೇಳುತ್ತಾರೆ’ ಎಂದರು.
‘ಜಡವಸ್ತುವನ್ನು ದೇವರನ್ನು ಮಾಡುವುದು ದೊಡ್ಡದಲ್ಲ, ಮನುಷ್ಯರನ್ನು ದೇವರು ಮಾಡುವುದು ದೊಡ್ಡದು. ಶರಣರು ಶಿವಲಿಂಗ, ನಾಲಿಗೆ ಗುರುಲಿಂಗ, ಮನಸ್ಸು ಮಹಾಲಿಂಗವಾಗಬೇಕು ಎಂದಿದ್ದಾರೆ. ಮಕ್ಕಳಾಗುವುದು ಮುಖ್ಯವಲ್ಲ, ಮಕ್ಕಳ ಮನಸ್ಸು ಹೊಂದಿದರೆ ಮಾತ್ರ ದೇವರ ರಾಜ್ಯದಲ್ಲಿ ಪ್ರವೇಶ ಎಂದು ಜೀಸಸ್ ಹೇಳುತ್ತಾರೆ. ಎಲ್ಲವನ್ನೂ ಗೆಲ್ಲಬಹುದು, ಪಂಚೆಂದ್ರೀಯ ಗೆಲ್ಲಲು ಸಾಧ್ಯವಾಗಲಿಲ್ಲ. ಪಂಚೆಂದ್ರೀಯಗಳ ಸುಖವನ್ನು ಬಯಸುತ್ತೇವೆ. ಅದೇ ಅಂತಿಮ ಸುಖವೆಂದು ನಂಬುತ್ತೇವೆ. ಸಾಸಿವೆಯಷ್ಟು ಸುಖಕ್ಕೆ,ಸಾಗರದಷ್ಟು ದುಃಖ ನೋಡಾ ಎಂದರು. ಮನಸ್ಸಿಗೆ ಸಂಸ್ಕಾರ ಕೊಡಬೇಕೆಂದು ಬಸವಾದಿ ಪ್ರಮಥರು ಹೇಳಿದ್ದಾರೆ’ ಎಂದು ವಿವರಿಸಿದರು.
‘ಕೊಳೆತ ದೇಹದ ಮುಂದೆ ಇರಬಹುದು. ಕೊಳೆತ ಮನಸ್ಸುಗಳ ಮುಂದೆ ಇರಲು ಸಾಧ್ಯವಿಲ್ಲ. ಮನಸ್ಸು ಮುಖ್ಯ. ಮನುಷ್ಯ, ಮನುಷ್ಯರ ನಡುವೆ ಬಾಂಧವ್ಯ ನೋಡುವ ಮನಸ್ಸು ಮುಖ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.