ಕೆರೂರ: ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನವ ಹಾಗೆ, ಇಲ್ಲಿನ ರೈತರೊಬ್ಬರು ಇರುವ ಅಲ್ಪ ಜಮೀನಿನಲ್ಲಿ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಸಮೀಪದ ನೀರಬೂದಿಹಾಳ ಗ್ರಾಮದ ರೈತ ರಾಮಪ್ಪ ಹೊನ್ಯಾಳ ತಮ್ಮ 1 ಎಕರೆ 30 ಗುಂಟೆ ಜಮೀನಿನಲ್ಲಿ ಸಾವಯವ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷಿಯಲ್ಲಿ ಆಸಕ್ತಿ ಹೊಂದಿದ ಇವರು ಕುಟುಂಬದ ಮೂಲ ಕಸಬವನ್ನು ಮುನ್ನಡೆಸುತ್ತಾ ವಾರ್ಷಿಕವಾಗಿ ₹ 4-5 ಲಕ್ಷ ಕೃಷಿಯಿಂದ ಲಾಭಗಳಿಸುತ್ತಿದ್ದಾರೆ.
ರೈತ ರಾಮಪ್ಪ ತಮ್ಮ 1ಎಕರೆ 30 ಗುಂಟೆ ಜಮೀನಿನಲ್ಲಿ 500 ಬಾಳೆಗಿಡ, 18 ನೇರಲ ಗಿಡ, 180 ನುಗ್ಗೆಕಾಯಿ ಗಿಡ, 160 ನಿಂಬಿ ಗಿಡ, 30 ಚಿಕು ಗಿಡಗಳನ್ನು ಬೆಳೆದು ವಾರ್ಷಿಕವಾಗಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಅಲ್ಲದೆ ಬಾಳೆ ಬೆಳೆ ಮಧ್ಯೆ 4 ಕ್ವಿಂಟಲ್ ಬೆಳ್ಳುಳ್ಳಿ ಬೆಳೆಯುತ್ತಿದ್ದಾರೆ. ಜೊತೆಗೆ ಜಮೀನಿನ ಸಂಪೂರ್ಣ ನಿರ್ವಹಣೆ ರಾಮಪ್ಪ ದಂಪತಿ ನೋಡಿಕೊಳ್ಳುತ್ತಿದ್ದಾರೆ ಯಾವುದೇ ಕಾರ್ಮಿಕರ ಮೇಲೆ ಅವಲಂಬಿತರಾಗಿಲ್ಲ.
ರೈತರು ಜಮೀನಿನಲ್ಲಿ ಒಂದು ಬೆಳೆ ಮೇಲೆ ಅವಲಂಬಿತರಾಗಿ ನಷ್ಟಕ್ಕೆ ಒಳಗಾಗುವ ಬದಲು ಮಿಶ್ರ ಬೆಳೆ ಬೆಳೆಯುವುದರಿಂದ ಪ್ರತಿ ಬಾರಿ ಒಂದಲ್ಲ ಒಂದು ಬೆಳೆಯಿಂದ ಉತ್ತಮ ಆದಾಯ ಬರುತ್ತದೆ ಎನ್ನುತ್ತಾರೆ ರೈತ ರಾಮಪ್ಪ.
ಕೃಷಿ ಇಲಾಖೆಯಿಂದ ಬರುವ ಬಹುಪಾಲು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಾವಯವ ಕೃಷಿ ಮಾಡುತ್ತಿರುವ ರಾಮಪ್ಪ ಅವರಿಗೆ ತಾಲ್ಲೂಕು ವತಿಯಿಂದ ನೀಡುವ ಆತ್ಮಶ್ರೇಷ್ಠ ಕೃಷಿ ಪ್ರಶಸ್ತಿ ಕೂಡ ಲಭಿಸಿದೆ.
ಜೀವಾಮೃತ ಬಳಕೆ
ಜಮೀನಿಗೆ ಬಳಸಲು ಗೊಬ್ಬರಕ್ಕೆ ಬೇಕಾದ ಸಾಮಗ್ರಿಗಳಾದ ಶೇಂಗಾ ಹಿಂಡಿ, ಬೆಲ್ಲ, ಮೆಕ್ಕಜೋಳದ ನುಚ್ಚು ಬಳಿಸಿಕೊಂಡು ಗೊಬ್ಬರವನ್ನು ಸ್ವತಃ ತಯಾರಿಸಿ ಬೆಳೆಗಳಿಗೆ ಸಿಂಪಡಿಸುತ್ತಾರೆ. ಸಾವಯವ ಕೃಷಿ ಪದ್ಧತಿಯಿಂದ ವಾರ್ಷಿಕವಾಗಿ ಹೆಚ್ಚು ಇಳುವರಿ ಪಡೆಯುತ್ತಿದ್ದೇನೆ, ಇದರ ಜೊತೆಗೆ ಬೆಳೆಗಳ ರೋಗಬಾಧೆ ತಪ್ಪಿಸಲು ಜೀವಾಮೃತ ಬಳಸಲಾಗುತ್ತದೆ ಎನ್ನುತ್ತಾರೆ ರೈತ ರಾಮಪ್ಪ.
ಸಮಗ್ರ ಕೃಷಿ ಅಳವಡಿಸಿಕೊಂಡರೆ ರೈತರು ಆರ್ಥಿಕವಾಗಿ ಸದೃಢರಾಗಬಹುದು ರಾಮಪ್ಪ ಹೊನ್ಯಾಳ, ಸಾವಯವ ಕೃಷಿಕ-ಮಂಜುಳಾ ಹುಲಿಕುಂಟೆ, ಪತ್ರಕರ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.