ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ತಾಲ್ಲೂಕಿನ 19ಕ್ಕೂ ಹೆಚ್ಚು ಪ್ರೌಢ ಶಾಲಾ ಶಿಕ್ಷಕರಿಗೆ ಎರಡು ತಿಂಗಳಿಂದ ಸಂಬಳ ಬಾರದೇ ಇರುವುದರಿಂದ ಶಿಕ್ಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗನೆ ಸಂಬಳವನ್ನು ಬಿಡುಗಡೆ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಬಾಗೌಡ ಪಾಟೀಲ ಆಗ್ರಹಿಸಿದರು.
ಅವರು ಶನಿವಾರ ಶಾಸಕ ಸಿದ್ದು ಸವದಿಯವರಿಗೆ ಮನವಿ ಪತ್ರ ನೀಡಿ ಮಾತನಾಡಿದರು.
‘ಜಿಲ್ಲೆಯ ಬೇರೆ ತಾಲ್ಲೂಕಿನ ಶಿಕ್ಷಕರು ಸಂಬಳ ಪಡೆದುಕೊಂಡಿದ್ದಾರೆ. ಆದರೆ ರಬಕವಿ ಬನಹಟ್ಟಿ ಪ್ರೌಢಶಾಲೆಯ ಶಿಕ್ಷಕರಿಗೆ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಹಬ್ಬಗಳು ಆರಂಭವಾಗಲಿವೆ. ಎರಡು ತಿಂಗಳ ಸಂಬಳವಿಲ್ಲದೇ ಇರುವುದರಿಂದ ಶಿಕ್ಷಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದರು.
ಶಾಸಕ ಸಿದ್ದು ಸವದಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ಮಾತನಾಡಿ, ‘ಆದಷ್ಟು ಬೇಗ ಸಂಬಳ ವಿಳಂಬದ ಕುರಿತು ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಬೇಗನೆ ಸಂಬಳ ಬಿಡುಗಡೆ ಮಾಡಬೇಕು’ ಎಂದು ಸೂಚಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಹನಗಂಡಿ, ಸಂಘದ ಕಾರ್ಯದರ್ಶಿ ಎಂ.ಎಂ.ನಾಯಕವಾಡಿ, ಬಿ.ಎಸ್. ಕಡಕೋಳ, ಶಂಕರ ಯೆಂಡಿಗೇರಿ, ಬಿದರಿ, ಡಿ.ಎಚ್.ಮುಜಾವರ, ಎಸ್.ಬಿ. ಆಲ್ಯಾಳ, ಬೇವೂರ, ಎಸ್.ಬಿ. ಘಡಾಲೋಟಿ, ಶಂಕರ ಪಾಲಭಾವಿ ಇದ್ದರು.
ಈ ಕುರಿತು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಮಾತನಾಡಿ, ‘ಬಿಇಒ ಮತ್ತು ಡಿಡಿಪಿಐ ಕಾರ್ಯಾಲಯದಿಂದ ಸರಿಯಾದ ಮಾಹಿತಿ ಕಳುಹಿಸಲಾಗಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಹಣಕಾಸು ವಿಭಾಗದ ಅಧಿಕಾರಿ ಜೊತೆಗೆ ಚರ್ಚೆ ಮಾಡಿದ್ದೇನೆ. ಮನವಿ ಕೂಡ ಸಲ್ಲಿಸಿದ್ದೇನೆ. ಬೆಂಗಳೂರಿನ ಹಣಕಾಸು ಇಲಾಖೆಯಲ್ಲಿ ತೊಂದರೆಯಾಗಿದ್ದು, ಕೂಡಲೇ ಬೆಂಗಳೂರಿಗೆ ಸಿಬ್ಬಂದಿ ಕಳುಹಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.
ಬೆಂಗಳೂರಿನಲ್ಲಿಯ ಹಣಕಾಸು ಇಲಾಖೆಯಲ್ಲಿ ತಾಂತ್ರಿಕ ಕಾರಣದಿಂದಾಗಿ ಶಿಕ್ಷಕರ ಸಂಬಳ ವಿಳಂಬವಾಗಿದೆ. ಆದಷ್ಟು ಬೇಗ ಸಂಬಳ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.