ಗುಳೇದಗುಡ್ಡ: ‘ನಾಡಿನ ಜನಪದರ ಬದುಕಿನಲ್ಲಿ ಹಾಸುಹೊಕ್ಕಾದ ಸೋಬಾನೆ ಹಾಡುಗಳು ಬದುಕಿನ ಅವಿಭಾಜ್ಯ ಅಂಗವಾಗಿದ್ದವು ಆದರೆ ಇಂದು ಜನಪದರ ಸೋಬಾನ ಪದಗಳು ಮರೆಯಾಗುತ್ತಿವೆ. ಅವು ನಮ್ಮ ಪರಂಪರೆಯ ಪ್ರತೀಕ’ ಎಂದು ಉಪನ್ಯಾಸಕಿ ಶಕುಂತಲಾ ಬರಗಿ ಹೇಳಿದರು.
ಪಟ್ಟಣದ ವೆಂಕಟೇಶ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕು ಆಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಗುಳೇದಗುಡ್ಡ ‘ಪರಿಸರದ ಸೋಬಾನೆ ಪದಗಳು’ ಎಂಬ ವಿಷಯ ಕುರಿತು ಮಾತನಾಡಿದರು.
‘ಸೋಬಾನೆ ಪದಗಳು ನಮ್ಮ ಬದುಕಿನ ಪ್ರತಿಬಿಂಬವಾಗಿದ್ದವು. ನೋವು, ನಲಿವು, ಸ್ವಾತಂತ್ರ್ಯ, ಸಾಹಸ, ಹೋರಾಟ, ಹುಟ್ಟು, ಮದುವೆ, ಕುಟ್ಟುವಾಗ, ಬೀಸುವಾಗ ಮಹಿಳೆಯರ ಬದುಕಿನ ಪ್ರತಿ ಸಂತೋಷದ ಕ್ಷಣಗಳ ಬಗ್ಗೆ ಹಾಡಿ ಹೊಗಳಿದ ನಮ್ಮ ಸೋಬಾನೆ ಪದಗಳು, ಇಂದು ಮರೆಯಾಗುತ್ತಿವೆ. ಅವುಗಳನ್ನು ಮುಂದಿನ ತಲೆಮಾರುಗಳಿಗೆ ಪರಿಚಯಿಸುವ ಅಗತ್ಯತೆ ಇದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಸಿ.ಎಂ.ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸೋಬಾನೆ ಪದಗಳು ನಮ್ಮ ಜನಪದರ ನಡಿ ಮಿಡಿತದ ನೋವು, ನಲಿವುಗಳ ಪ್ರತಿಬಿಂಬಗಳು. ಗ್ರಾಮೀಣ ಸೊಗಡು ಅವಲಂಬಿಸಿರುವುದೇ ಸೋಬಾನ ಪದಗಳ ಮೇಲೆ, ಗ್ರಾಮೀಣ ಮಹಿಳೆಯರು ನಿತ್ಯದ ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಂಡು ಬದುಕಿದ್ದರು. ಇಂದು ಮರೆಯಾಗದಂತೆ ಸರ್ಕಾರ ಮತ್ತು ಸಂಘಟನೆಗಳು ಕೆಲಸ ಮಾಡಲಿ’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಬಿಜ್ಜಳ, ಚಂದ್ರಶೇಖರ ಹೊಸಮನಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.