ADVERTISEMENT

ಬಾಗಲಕೋಟೆ | ಶಿವಾಜಿ ಮೂರ್ತಿ ಪ್ರತಿಷ್ಠಾಪನೆ: ವಾಗ್ವಾದ, ಪ್ರತಿಭಟನಾಕಾರರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 16:12 IST
Last Updated 16 ಆಗಸ್ಟ್ 2023, 16:12 IST

ಬಾಗಲಕೋಟೆ: ನಗರದ ಲಯನ್ಸ್ ಸರ್ಕಲ್‌ ಬಳಿ ಕೂಡಿಸಿರುವ ಛತ್ರಪತಿ ಶಿವಾಜಿ ಮೂರ್ತಿ ತೆರವುಗೊಳಿಸದಂತೆ ಆಗ್ರಹಿಸಿ ಪ್ರತಿಭಟನೆ‌ ನಡೆಸುತ್ತಿದ್ದ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧನ‌ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪನಾ‌ ಸಮಿತಿ ಉಪಾಧ್ಯಕ್ಷ ನಾರಾಯಣ ಭಾಂಡಗೆ ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠ ಏಕವಚನದಲ್ಲಿ ಮಾತನಾಡಿಸಿದರು ಎಂದು ವಾಗ್ವಾದ ನಡೆಯಿತು.

ಸ್ಥಳದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ADVERTISEMENT

ಶಿವಾಜಿ ಮೂರ್ತಿಯನ್ನು ಅನಧಿಕೃತವಾಗಿ ಕೂಡಿಸಲಾಗಿದೆ. ಆದ್ದರಿಂದ ಅದನ್ನು ತೆರವುಗೊಳಿಸಬೇಕಾಗಿರುವುದರಿಂದ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆ. 16ರಿಂದ ಆ. 18ರ ಮಧ್ಯರಾತ್ರಿಯವರೆಗೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಶಿವಾಜಿ ಮೂರ್ತಿ ತೆರವುಗೊಳಿಸಬಾರದು ಎಂದು ಆಗ್ರಹಿಸಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಮುಖಂಡರು ಹಾಗೂ ನಗರಸಭೆ ಸದಸ್ಯರು ಬುಧವಾರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

‘ಈಗ ಮೂರ್ತಿ ಕೂಡಿಸಿರುವ ಜಾಗದಲ್ಲಿ 18 ಅಡಿ ಎತ್ತರದ ಬೃಹತ್ ಮೂರ್ತಿ ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೂರ್ತಿಯೂ ಸಿದ್ಧವಿದೆ. ಈ ನಡುವೆ ಶಿವಾಜಿ ಅಭಿಮಾನಿಗಳು ರಾತ್ರಿ ವೇಳೆ ಸಣ್ಣದಾದ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇದರೊಂದಿಗೆ ಬೃಹತ್ ಮೂರ್ತಿಯನ್ನೂ ಶೀಘ್ರವೇ ಪ್ರತಿಷ್ಠಾಪಿಸಲಾಗುವುದು’ ಎಂದರು.

‘ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳು ಮೂರ್ತಿ ತೆರವು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಆದರೂ, ಮಂಗಳವಾರ ರಾತ್ರಿ ಮೂರ್ತಿ ತೆರೆವುಗೊಳಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಹಾಗಾಗಿ, ನೂರಾರು ಜನರು ಅಲ್ಲಿ ಸೇರಿದ್ದರು. ಮೂರ್ತಿ ಪ್ರತಿಷ್ಠಾಪನೆಗೆ ಈಗಾಗಲೇ ನಗರಸಭೆಯವರೇ ಭೂಮಿ ನೀಡಿದ್ದಾರೆ. ಲೋಕೋಪಯೋಗಿ ಹೆಸ್ಕಾಂ ಮುಂತಾದವರ ಅನುಮತಿ ಪಡೆಯಲಾಗಿದೆ’ ಎಂದು ಸಮಿತಿ ಉಪಾಧ್ಯಕ್ಷ ನಾರಾಯಣ ಭಾಂಡಗೆ ಹೇಳಿದರು.

‘ಶಿವಾಜಿ ಮಹಾರಾಜ ಹಿಂದೂ ಸಮಾಜದ ಸಂಸ್ಥಾಪಕರಾಗಿದ್ದಾರೆ. ಅವರ ಮೂರ್ತಿಯನ್ನು ತೆರವುಗೊಳಿಸಿದರೆ, ಮುಂದೆ ಆಗುವ ಅನಾಹುತಗಳಿಗೆ ನಗರಸಭೆ ಹೊಣೆಯಾಗುತ್ತದೆ’ ಎಂದು ಎಚ್ಚರಿಸಿದ ಅವರು, ಮೂರ್ತಿ ಪ್ರತಿಷ್ಠಾಪನೆ ಖಚಿತ ಎಂದರು.

ಮೂರ್ತಿ ಹಿನ್ನೆಲೆ: ಕೆಲ ದಿನಗಳ ಹಿಂದೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ಕೆ ಚಾಲನೆ ನೀಡಲು ಬಿಜೆಪಿ ಮುಖಂಡರು ದಿನಾಂಕ ನಿಗದಿ ಮಾಡಿ ಸಿದ್ಧತೆ ಮಾಡಿಕೊಂಡಿದ್ದರು. ಕೊನೆ ಗಳಿಗೆಯಲ್ಲಿ ಅದೇ ಪಕ್ಷದ ಕೆಲವರು ವಿರೋಧ ವ್ಯಕ್ತಪಡಿಸಿದರು ಎಂಬ ಆರೋಪ ಕೇಳಿ ಬಂದ ಕಾರಣಕ್ಕೆ ಪ್ರತಿಷ್ಠಾಪನೆ ಕಾರ್ಯ ರದ್ದು ಮಾಡಲಾಗಿತ್ತು.

ಶಿವಾಜಿ ಮೂರ್ತಿಗೆ ಅಡ್ಡಿ ಪಡಿಸಿದ್ದರು ಎಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಲಕೋಟೆಯಲ್ಲಿ ನಡೆಸಿದ ಸಭೆಯಲ್ಲಿ ಗಲಾಟೆಯಾಗಿತ್ತು. ಈಗ ಏಕಾಏಕಿ ಆ ಸ್ಥಳದಲ್ಲಿ ಸಣ್ಣದಾದ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.