ADVERTISEMENT

ಸಿದ್ದರಾಮಣ್ಣ, ಖ್ಯಾತಿಯ , ಜಾನುವಾರು ಸಂತೆಗೆ ಬೇಕಿದೆಯಣ್ಣ ಕಾಯಕಲ್ಪ ಭಾಗ್ಯ...!

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 17:28 IST
Last Updated 17 ಜುಲೈ 2018, 17:28 IST
-ಕೆರೂರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ ನೆರವೇ ರುವ ಬೃಹತ್ ಕುರಿ, ಜಾನುವಾರು ಸಂತೆ ವಹಿವಾಟು.
-ಕೆರೂರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ ನೆರವೇ ರುವ ಬೃಹತ್ ಕುರಿ, ಜಾನುವಾರು ಸಂತೆ ವಹಿವಾಟು.   

ಕೆರೂರ: ಕುರಿ,ಜಾನುವಾರು ಸಂತೆಯಿಂದ ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದಿರುವ ಪಟ್ಟಣದ ಮಂಗಳವಾರದ ಸಂತೆ ಯು ಅನೇಕ ಮೂಲಭೂತ ಸೌಲಭ್ಯಗಳು, ಸಮರ್ಪಕ ನಿರ್ವಹಣೆ ಕೊರತೆಗಳ ಪರಿಣಾಮ ಸೂಕ್ತ ಕಾಯಕಲ್ಪ ಕ್ಕಾಗಿ ಈ ಬೃಹತ್ ಸಂತೆಯ ಜನಜಂಗುಳಿ ಎದುರು ನೋಡುತ್ತಿದೆ.


ರಾ.ಹೆದ್ದಾರಿ ಬದಿಯ ಕೃಷಿ ಮಾರುಕಟ್ಟೆ ಪ್ರಾಂಗಣದ ಸುಮಾರು 30 ಎಕರೆ ವಿಶಾಲ ಪ್ರದೇಶದಲ್ಲಿ ಪ್ರತಿ ವಾರ ನಸುಕಿನಿಂದಲೇ ಆರಂಭಗೊಳ್ಳುವ ಕುರಿ, ಜಾನುವಾರ ಸಂತೆಯು ಹೊತ್ತು ಕಳೆದಂತೆ ಗಿಜಿಗುಟ್ಟುತ್ತದೆ.ಹೊತ್ತು ಮುಳುಗುವ ಮುನ್ನವೇ ಇಲ್ಲಿನ ಸಂತೆಯು ಕೋಟ್ಯಂತರ ಮೊತ್ತದ ವಹಿವಾಟು ದಾಖಲಾಗುತ್ತದೆ.


ಬೃಹತ್ ಸಂತೆ : ರಾಜ್ಯವಷ್ಟೇ ಅಲ್ಲದೇ ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಮತ್ತು ಕೇರಳಗಳಿಂದ ನೂರಾರು ಸಗಟು ವರ್ತಕರು, ಖರೀದಿದಾರರು ಈ ಸಂತೆಯ ಖರೀದಿ, ಮಾರಾಟದ ಪ್ರಮುಖ ವ್ಯಕ್ತಿಗಳು. ಇವರೊಂದಿಗೆ ವಿವಿಧ ಜಿಲ್ಲೆಗಳ ಪ್ರಮುಖರು, ರೈತರು ಸಹ ಈ ವಹಿವಾಟಿನಲ್ಲಿ ನೆರೆಯುತ್ತಾರೆ.

ADVERTISEMENT


ಹೆಸರಿಗೆ ಇಷ್ಟೆಲ್ಲ ಪ್ರಾಮುಖ್ಯತೆ ಗಳಿಸಿದ್ದರೂ ಸಹ ಎಪಿಎಂಸಿಯ ಈ ಸಂತೆ ಪ್ರದೇಶದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ.ಕೃಷಿಕ, ವ್ಯಾಪಾರಿಗಳಿಗೆಶುದ್ಧ ಕುಡಿಯುವ ನೀರು, ಜಾನುವಾರುಗಳಿಗೆ ನೀರು, ರಾತ್ರಿ ಬೆಳಕಿನ ಲಭ್ಯತೆ ಇಲ್ಲ.ಅಲ್ಲದೇ ಶೌಚಾಲಯ, ಬೇಸಿಗೆಯಲ್ಲಿ ನೆರಳಿನ ಆಶ್ರಯದ ಸೌಕರ್ಯಗಳಿಲ್ಲ.


ವಹಿವಾಟುದಾರರು ಬಿಸಿಲು, ಮಳೆ, ಗಾಳಿಯಲ್ಲೇ ನಿಂತು ವ್ಯಾಪಾರ ಮಾಡುವ ಅವ್ಯವಸ್ಥೆ ಇಲ್ಲಿದೆ.ಮಣ್ಣಲ್ಲಿ ಬೆರೆತ ಅಬಕಾರ ಎಂಬ ರಕ್ತ ಹೀರುವ ಕ್ರಿಮಿಯ ಉಪಟಳ ಇಲ್ಲಿ ಅತಿಯಾಗಿದೆ.ಜಾನುವಾರುಗಳು ಸೇರಿದಂತೆ ಜನರನ್ನು ಇವು ಪೀಡಿಸದೇ ಬಿಡುವುದಿಲ್ಲ.ಕ್ಷಣಾರ್ಧದಲ್ಲಿ ಕಾಲಿಗೆ ಅಂಟಿಕೊಂಡು ರಕ್ತ ಹೀರು ನಮ್ಮ ಅರಿವಿಗೆ ಬರುವುದಿಲ್ಲ.ಇದರ ಕಾಟ ನಿಗ್ರಹಿಸಲು ಎಪಿಎಂಸಿ ಅಧಿಕಾರಿಗಳು ಯಾವುದೇ ಕ್ರಮ ಮುಂದಾಗಿಲ್ಲ.ಇದು ಸಂತೆ ಯ ಖ್ಯಾತಿಯನ್ನು ಕುಗ್ಗಿಸುತ್ತಿದೆ ಎಂದು ಅನೇಕ ವರ್ತಕರು ಅಳಲು ತೋಡಿಕೊಳ್ಳುತ್ತಾರೆ.


ರಸ್ತೆ ಪಕ್ಕವೇ ತರಕಾರಿ ಸಂತೆ : ಕುರಿ, ಜಾನುವಾರು ಸಂತೆ ಆ ರಗಳೆ ಆದರೆ, ಎ.ಆರ್. ಹಿರೇಮಠ ಹೈಸ್ಕೂಲ ಎದುರು ಮತ್ತು ಪೊಲೀಸ್ ಠಾಣೆಯಿಂದ ಬಸ್‌ನಿಲ್ದಾಣದ ವರೆಗೆ ರಾ.ಹೆದ್ದಾರಿ ರಸ್ತೆಯ ಇಕ್ಕೆಲಗಳಲ್ಲಿ ನೆರವೇ ರುವ ತಾಜಾ ತರಕಾರಿ ಸಂತೆಯು ಸ್ಥಳೀಯರಿಗೆ ಉತ್ತಮ ಹಾಗೂ ತರಹೇವಾರಿ ತರಕಾರಿ, ದಿನಸುಗಳನ್ನು ಪೂರೈಸಿದರೆ, ಸುತ್ತಮುತ್ತಲಿನ ರೈತಾಪಿ ಸಮೂಹಕ್ಕೆ ತಮ್ಮ ಹೊಲಗಳಲ್ಲಿ ಬೆಳೆದ ಅನೇಕ ತರಕಾರಿ, ಬೇಳೆ ಕಾಳುಗಳ ಮಾರಾಟಕ್ಕೆ ಕೇಂದ್ರ ಸ್ಥಳವಾಗಿದೆ.


ಆದರೆ ರಸ್ತೆ ಪಕ್ಕವೇ ಈ ಸಂತೆ ನೆರವೇರುವ ಕಾರಣ ಸದಾ ಅಪಾಯ ಕಟ್ಟಿಟ್ಟ ಬುತ್ತಿ.ಜೊತೆಗೆ ಇರುವೆ ಸಾಲುಗ ಳಂತೆ ಬರುವ ವಾಹನಗಳ ಸುಗಮ ಸಂಚಾರಕ್ಕೆ ಇದು ತೀವ್ರ ತೊಡಕಾಗಿ ಪರಿಣಮಿಸಿದೆ.ಎಂಥ ರಾಜಕೀಯ ನಾಯಕರು ಬಂದರೂ ಇಲ್ಲಿ ನಿಲ್ಲದೇ ಹೋಗುವಂತಿಲ್ಲ.ಸಂತೆಯ ಸದ್ದು-ಗದ್ದಲ ಯಾವುದನ್ನು ಲೆಕ್ಕಿಸದೇ ಇಡೀ ರಸ್ತೆಯನ್ನು ಆವರಿಸಿ ಬಿಟ್ಟಿರುತ್ತದೆ.ಅಧಿಕಾರಿಗಳು ಎಷ್ಟೇ ಸರ್ಕಸ್ ಮಾಡಿದರೂ ಈ ಸಮಸ್ಯೆ ಪರಿಹರಿ ಸಲಾಗಿಲ್ಲ ಎಂಬುದು ವರ್ತಕ, ಗ್ರಾಹಕರ ಕೊರಗು.


ಕಾಯಕಲ್ಪ ಭಾಗ್ಯ : ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು, ತಂದೆ, ತಾಯಿಗಳನ್ನು ಹೊರತುಪಡಿಸಿ ದುಡ್ಡು ಕೊಟ್ಟರೆ ಈ ಸಂತೆಯಲ್ಲಿ ಏನು ಬೇಕಾದರೂ ಖರೀದಿಸಬಹುದು ಎಂಬ ಷ್ಟು ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದಿರುವ ಗತಕಾಲದ ಪರಂಪರೆಯ ಕೆರೂರ ಕುರಿ, ಜಾನುವಾರುಗಳ ಸಂತೆಗೆ ಕಾಯಕಲ್ಪ ಭಾಗ್ಯ ಕರುಣಿಸುವರೇ...? ಎಂಬ ಆಶಯದೊಂದಿಗೆ ಈ ಭಾಗದ ಜನತೆ ಅಭಿವೃದ್ಧಿಗೆ ಹಾತೊರೆಯುತ್ತಿದ್ದಾರೆ.


ವಿಶೇಷ ಸುದ್ದಿ, ಚಿತ್ರ : ಪ್ರಭು ಎಂ ಲಕ್ಷೆಟ್ಟಿ ಕೆರೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.