ADVERTISEMENT

ಸಾಮಾಜಿಕ ಜಾಲತಾಣಕ್ಕೆ ಬೇಕಿದೆ ಕಡಿವಾಣ: ತಾತಾಸಾಹೇಬ ಬಾಂಗಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 16:21 IST
Last Updated 30 ಜೂನ್ 2024, 16:21 IST
ಸಮ್ಮೇಳನದ ಅಧ್ಯಕ್ಷ ತಾತಾಸಾಹೇಬ ಬಾಂಗಿ ಸಂವಾದ ನಡೆಸಿದರು
ಸಮ್ಮೇಳನದ ಅಧ್ಯಕ್ಷ ತಾತಾಸಾಹೇಬ ಬಾಂಗಿ ಸಂವಾದ ನಡೆಸಿದರು   

ಬಾಗಲಕೋಟೆ: ಯುವ ಜನರ ಮೇಲೆ ಸಾಮಾಜಿಕ ಜಾಲತಾಣ ಬಹಳ ಕೆಟ್ಟ ಪರಿಣಾಮ ಬೀರುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ತಾತಾಸಾಹೇಬ ಬಾಂಗಿ ಹೇಳಿದರು.

ಭಾನುವಾರ ಅಂಬೇಡ್ಕರ್ ಭವನದಲ್ಲಿ ಸಮ್ಮೇಳನ ಅಧ್ಯಕ್ಷರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಯುವ ಜನರು ಓದಿನಿಂದ ದೂರ ಸರಿಯುತ್ತಿದ್ದಾರೆ. ಅವರಿಗೆ ಓದಿನ ಮಹತ್ವ, ಅದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಬೇಕು ಎಂದರು.

ಸಾಹಿತ್ಯದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಇದನ್ನು ಲಂಕೇಶ ಸೇರಿದಂತೆ ಹಲವರು ಮಾಡಿ ತೋರಿಸಿದ್ದಾರೆ. ಸಾಹಿತ್ಯ ಜೀವನದ ಭಾಗವಾಗಿದ್ದರೆ, ಸುಂದರ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ಸಂಶೋಧನೆಯ ಗುಣಮಟ್ಟ ಕಡಿಮೆಯಾಗಿದೆ. ವಾಣಿಜ್ಯೀಕರಣವೂ ಆಗಿದೆ. ಸಂಶೋಧನೆ ಚಿಕ್ಕದಾಗುತ್ತಾ ಸಾಗಿದ್ದು, ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ನೇಕಾರರು ಬಹಳ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಸಂಕಷ್ಟಗಳ ಪರಿಹಾರಕ್ಕಾಗಿ ಹೋರಾಟ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಅರ್ಪಣಾ ಮನೋಭಾವ ಕಡಿಮೆಯಾಗಿದೆ. ಸಾಧನೆಗೆ ಅರ್ಪಣಾ ಭಾವ ಬಹಳ ಮುಖ್ಯ ಎಂದು ಹೇಳಿದರು.

ವಕೀಲ ವೃತ್ತಿಯ ಜತೆಗೆ ಹೋರಾಟ, ಪತ್ರಕರ್ತನ ಹಾದಿಗೆ ಹೊರಳಲು ತಂದೆಯೇ ಪ್ರೇರಣೆಯಾಗಿದ್ದರು. ಹಲವಾರು ಪುಸ್ತಕಗಳನ್ನು ರಚಿಸಿದ್ದೇನೆ ಎಂದರು.

ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದುಪುಡಿ ಮಾತನಾಡಿ, ಯುವಕರಲ್ಲಿ ಕನ್ನಡದ ಅಭಿರುಚಿ ಬೆಳೆಸಬೇಕು. ನಾಡು, ನುಡಿಯ ಬಗ್ಗೆ ತಿಳಿಸಿಕೊಡಬೇಕು. ಸಾಹಿತ್ಯ ಆಸ್ವಾದಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಿದ್ದರಾಮ ಮನಹಳ್ಳಿ ಮಾತನಾಡಿ, ಸಮಾಜ ತಿದ್ದುವ ಶಕ್ತಿಗಳಲ್ಲಿ ಸಾಹಿತ್ಯವೂ ಒಂದಾಗಿದೆ. ಧರ್ಮ, ಶಿಕ್ಷಣದ ನಂತರ ಸ್ಥಾನದಲ್ಲಿ ಸಾಹಿತ್ಯವಿದೆ ಎಂದರು.

ಸಹಜಾನಂದ ಕೆಂಗಲಗುತ್ತಿ, ಕೆ.ಬಿ. ಮೊಬರದ, ಉಮಾ ಅಕ್ಕಿ, ಕೆ.ಎನ್‌. ಬಡಿಗೇರ, ಜಗದೀಶ ಹಾದಿಮನಿ, ಚಿತ್ರರಂಜನ ನಾದ್ರೇಕರ ಮತ್ತಿತರರು ಅಧ್ಯಕ್ಷರೊಂದಿಗೆ ಸಂವಾದ ನಡೆಸಿದರು.

ಅತಿಥಿ, ಸಾಹಿತಿಗಳ ಗೈರು

ಬಾಗಲಕೋಟೆ: ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರದ್ದು ಮಾತ್ರವಲ್ಲ ಆಹ್ವಾನ ಪತ್ರಿಕೆಯಲ್ಲಿದ್ದ ಅತಿಥಿಗಳ ಸಾಹಿತಿಗಳ ಕೊರತೆಯೂ ಕಾಡಿತು ಸಂಜೆ ನಡೆದ ಗಜಲ್‌–ಚುಟುಕು ಹೈಕುಗೋಷ್ಠಿಯಲ್ಲಿ 36 ಕವಿಗಳ ಹೆಸರಿತ್ತು. ಆದರೆ ವಾಚನಕ್ಕೆ ಬಂದವರ ಸಂಖ್ಯೆ ಅರ್ಧವನ್ನೂ ದಾಟಿರಲಿಲ್ಲ. ಮಹಿಳಾ ಗೋಷ್ಠಿಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಉದ್ಘಾಟನೆ ಕಾರ್ಯಕ್ರಮದಿಂದ ಹಿಡಿದು ಕೊನೆಯ ಕಾರ್ಯಕ್ರಮದವರೆಗೂ ಆಹ್ವಾನಿತ ಹಲವರು ಗೈರಾಗಿದ್ದರು. ಸಾಹಿತ್ಯಾಸಕ್ತರ ಕೊರತೆಯೂ ಎದ್ದು ಕಾಣುತ್ತಿತ್ತು. ಎರಡನೇ ದಿನವಾದ ಭಾನುವಾರ ಅಂಬೇಡ್ಕರ್ ಭವನ ತುಂಬಲೇ ಇಲ್ಲ. 20ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ ನಾಲ್ಕು ಪುಸ್ತಕಕ್ಕೆ ಸೀಮಿತವಾಗಿದ್ದರೆ ಉಳಿದ ಮಳಿಗೆಗಳಲ್ಲಿ ಬಟ್ಟೆ ವಿವಿಧ ವಸ್ತುಗಳ ಮಾರಾಟ ಮಳಿಗೆ ನಿರ್ಮಿಸಲಾಗಿತ್ತು. ‘ಜನರು ಬಾರದ್ದರಿಂದ ವ್ಯಾಪಾರ ಸರಿಯಾಗಿ ಆಗಲಿಲ್ಲ. ಬೀಳಗಿ ಸಮ್ಮೇಳನದಲ್ಲಿ ಒಳ್ಳೆಯ ವ್ಯಾಪಾರವಾಗಿತ್ತು. ಇಲ್ಲಿ ಆಗಲಿಲ್ಲ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.