ಇಳಕಲ್: ಇಲ್ಲಿಯ ಕಾಸೀಂ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವಿನೊಂದಿಗೆ ಯುವ ಚಿತ್ರ ಕಲಾವಿದ ಮಹೇಶ ವಾಲೀಕಾರ ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಲಾರಸಿಕರ ಮನಸ್ಸನ್ನು ಸೂರೆಗೊಂಡಿತು.
ಚಿತ್ರ ಬಿಡಿಸುವ ಮೂಲಕ ಪ್ರದರ್ಶನ ಉದ್ಘಾಟಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಗಂಗಾಧರ ಪಾಟೀಲ ಮಾತನಾಡಿ, ‘ವಿವಿಧ ಕಡೆಗಳಲ್ಲಿ ಚಿತ್ರಕಲಾ ಪ್ರದರ್ಶನ ಆಯೋಜಿಸುವುದರಿಂದ ಉದಯೋನ್ಮುಖ ಚಿತ್ರ ಕಲಾವಿದರಿಗೆ ಸಹೃದಯಿ ಕಲಾಭಿಮಾನಿಗಳ ಮೆಚ್ಚುಗೆ, ಕಲಾ ವಿಮರ್ಶಕರ ಸಲಹೆಗಳು ಇನ್ನಷ್ಟು ಸಾಧನೆ ಮಾಡಲು ಪ್ರೇರಕವಾಗುತ್ತವೆ. ಹೆಚ್ಚೆಚ್ಚು ಜನರು ತನ್ನ ಕಲಾಕೃತಿಗಳನ್ನು ವೀಕ್ಷಿಸಬೇಕು ಎಂಬುದು ಎಲ್ಲ ಸೃಜನಶೀಲರ ಕಲಾವಿದರ ಆಸೆಯಾಗಿರುತ್ತದೆ. ಮಹೇಶ ವಾಲೀಕಾರ ಅವರ ಸಂಯೋಜನೆ, ರೇಖೆಗಳು ಕಲಾಕೃತಿಯನ್ನು ಹಲವು ಅರ್ಥಗಳಲ್ಲಿ ಬೆಳೆಸುತ್ತವೆ. ಕಲಾವಿದನಾಗಿ ಅತ್ಯುತ್ತಮ ಪರಿಕಲ್ಪನೆಗಳನ್ನು ಚಿತ್ರಗಳಾಗಿ ಆಕಾರ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕಿ ಎಂ.ಜಿ. ಕೊಡಗಲಿ ಮಾತನಾಡಿ, ‘ಯಶಸ್ಸಿನತ್ತ ಸಾಗುವಾಗ ಬೇರೆಯವರು ಕಾಲು ಎಳೆಯುವುದು ಸಹಜ. ಆಗ ಇನ್ನಷ್ಟು ಕ್ರಿಯಾಶೀಲತೆಯಿಂದ ತಲ್ಲೀನರಾಗುವ ಮೂಲಕ ಉತ್ತಮ ಕಲಾಕೃತಿ ನೀಡಬೇಕು. ಕಾಲು ಎಳೆಯುವವರು ಇದ್ದಾಗಲೇ ಕಲಾವಿದರಿಗೆ ಸಾಧನೆಯ ಮಾರ್ಗಗಳು ಸ್ಪಷ್ಟವಾಗುತ್ತವೆ’ ಎಂದು ಹೇಳಿದರು.
ಅತಿಥಿಗಳಾಗಿ ನಿವೃತ್ತ ಶಿಕ್ಷಕ ಮಹಾದೇವ ಕಂಬಾಗಿ, ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ ಅಂಗಡಿ ಇವರು ಕಲಾಕೃತಿಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಕಲಾವಿದರಾದ ಕಾಸೀಂ ಕನಸಾವಿ, ಶೇಖರ ಮಾಳಿ, ಚಂದ್ರಕಾಂತ ಸರೋದೆ ಉಪಸ್ಥಿತರಿದ್ದರು. ರಾಣಿ. ಪಲ್ಲೇದ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.