ADVERTISEMENT

ಬಾಗಲಕೋಟೆ: 3 ವರ್ಷಗಳಲ್ಲಿ 1,603 ಬಾಲ ಕಾರ್ಮಿಕರ ರಕ್ಷಣೆ

ದಾಖಲಾಗದ ಪ್ರಕರಣ; ಶಿಕ್ಷೆ ಪ್ರಮಾಣವೂ ಕಡಿಮೆ

ಬಸವರಾಜ ಹವಾಲ್ದಾರ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
<div class="paragraphs"><p>ಬಾಲ ಕಾರ್ಮಿಕರು (ಸಾಂದರ್ಭಿಕ ಚಿತ್ರ)</p></div>

ಬಾಲ ಕಾರ್ಮಿಕರು (ಸಾಂದರ್ಭಿಕ ಚಿತ್ರ)

   

ಬಾಗಲಕೋಟೆ: ರಾಜ್ಯದ ವಿವಿಧೆಡೆ ಕಾರ್ಮಿಕ ಇಲಾಖೆ ಮೂರು ವರ್ಷಗಳಲ್ಲಿ ನಡೆಸಿದ ದಾಳಿಗಳಲ್ಲಿ 1,603 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. 519 ಪ್ರಕರಣಗಳು ದಾಖಲಾಗಿದ್ದು, 66 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

ಕಾರ್ಮಿಕ ಇಲಾಖೆಯು 2021ರಿಂದ 2023ರ ಅಂತ್ಯದವರೆಗೆ ರಾಜ್ಯದಲ್ಲಿ 77,486 ಕಡೆ ದಾಳಿ ನಡೆಸಿ,₹18,59 ಲಕ್ಷ ದಂಡ ವಿಧಿಸಿದೆ. ಈ ವರ್ಷವೂ 8,445 ಕಡೆ ದಾಳಿ ನಡೆಸಿ, 235 ಮಕ್ಕಳನ್ನು ರಕ್ಷಿಸಿದೆ.

ADVERTISEMENT

ಬೆಂಗಳೂರು ಗ್ರಾಮಾಂತರ, ಧಾರವಾಡ, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿ, ರಕ್ಷಿಸಲಾಗಿದೆ. ಆದರೆ, ಪ್ರಕರಣಗಳನ್ನು ದಾಖಲಿಸಿಲ್ಲ. ಮಕ್ಕಳನ್ನು ದುಡಿಸಿಕೊಳ್ಳುವವರಿಗೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಬಿಡಲಾಗುತ್ತದೆ.

ಎಲ್ಲೆಲ್ಲಿ ಹೆಚ್ಚು: ಹೋಟೆಲ್‌, ಖಾನಾವಳಿ, ಮನೆ ನಿರ್ಮಾಣ, ಕೃಷಿ ಚಟುವಟಿಕೆ, ಉಪಕಸುಬಾದ ದನ, ಕುರಿ ಕಾಯುವವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತದೆ. ಅಸಂಘಟಿತ ವಲಯದಲ್ಲಿ ದುಡಿಸಿಕೊಳ್ಳುವ ಮಕ್ಕಳನ್ನು ಪತ್ತೆ ಮಾಡುವುದು ಅಧಿಕಾರಿಗಳಿಗೆ ಸವಾಲಾಗಿದೆ.

14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸುವಂತಿಲ್ಲ. ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೋಟೆಲ್‌, ಕಾರ್ಖಾನೆಗಳ ಮೇಲೆ ಆಗಾಗ ದಾಳಿ ನಡೆಸಿ ಪರಿಶೀಲಿಸಲಾಗುತ್ತದೆ. ಅಲ್ಲಿರುವ ಮಕ್ಕಳನ್ನು ರಕ್ಷಿಸಲಾಗುತ್ತದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು ಎಂದು ಜಾಗೃತಿಯನ್ನೂ ಮೂಡಿಸಲಾಗುತ್ತದೆ’ ಎಂದು ಬಾಗಲಕೋಟೆ ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸಂಸ್ಥೆ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ತಿಳಿಸಿದರು.

ಬಾಲ ಕಾರ್ಮಿಕರು ಪತ್ತೆಯಾದ ಕಾರ್ಖಾನೆಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಜೊತೆಗೆ ಶಿಕ್ಷೆಯನ್ನೂ ಕೊಡಿಸಬೇಕು.
–ಶಶಿಧರ ಕೋಸುಂಬೆ, ಸದಸ್ಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.