ಬಾಗಲಕೋಟೆ : ’ಚುನಾವಣೆಗೆ ಸ್ಪರ್ಧಿಸಲು ಏನೋ ಒಂದು ಟಿಕೆಟ್ ಕೈತಪ್ಪಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ತ್ಯಜಿಸಿ ಬೇರೆ ಪಕ್ಷಕ್ಕೆ ಹೋಗುವುದು ನನ್ನ ಜಾಯಮಾನದಲ್ಲೇ ಇಲ್ಲ‘ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂದು ಜಿಲ್ಲೆಯಲ್ಲಿ ಹರಡಿರುವ ವದಂತಿ ತಳ್ಳಿಹಾಕಿದರು. ಸಚಿವ ಮುರುಗೇಶ್ ನಿರಾಣಿ ನಮ್ಮ ಸ್ನೇಹಿತರು, ಪಕ್ಷ ಬೇರೆಯಾದರು ಅವರು ನಾನು ಒಂದೇ ತಾಲ್ಲೂಕಿನವರು. ನನ್ನ ಮೇಲಿನ ಅಭಿಮಾನಕ್ಕೆ ಬಿಜೆಪಿಗೆ ಆಹ್ವಾನಿಸುವ ಮಾತು ಹೇಳಿದ್ದಾರೆ. ಅದಕ್ಕೆ ನಾನು ಕೃತಜ್ಞ ಸಲ್ಲಿಸುತ್ತೇನೆ ಎಂದರು.
ಕಳೆದ 45 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡಿದ್ದೇನೆ. ಪಕ್ಷ ನನಗೆ ಅನೇಕ ಸ್ಥಾನಮಾನ ಕೊಟ್ಟು, ಜನಸೇವೆ ಮಾಡಲು ಅವಕಾಶ ಕಲ್ಪಿಸಿದೆ. ಪಕ್ಷ ದೊಡ್ಡದು. ತಾಯಿ ಸಮಾನ. ಅದರ ನಿರ್ಣಯ ಗೌರವಿಸೋಣ ಎಂದು ಕಾರ್ಯಕರ್ತರು, ಅಭಿಮಾನಿಗಳಿಗೆ ಹೇಳಿದ್ದೇನೆ. ನನಗೆ ಟಿಕೆಟ್ ತಪ್ಪಿದೆ ಎಂದು ಪಕ್ಷಕ್ಕೆ ಹಾನಿ ಮಾಡುವುದಕ್ಕೆ ಕೈ ಹಾಕಿಬೇಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಈ ಕ್ಷಣದವರೆಗೂ ನನಗೆ ಯಾಕೆ ಟಿಕೆಟ್ ಕೈತಪ್ಪಿದೆ ಎಂಬುದು ಗೊತ್ತಿಲ್ಲ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ, ಸಮಸ್ಯೆ ಬಗ್ಗೆ ಅಧಿವೇಶನದ ಒಳಗೆ ಹೊರಗೆ ಹೋರಾಟ ಮಾಡಿದ್ದೇನೆ. ಪರಿಷತ್ ಟಿಕೆಟ್ ತಪ್ಪಿದ ಮಾತ್ರಕ್ಕೆ ನಮ್ಮ ಹೋರಾಟ ನಿಲ್ಲೋದಿಲ್ಲ. ಅದು ಇನ್ನಷ್ಟು ನಮ್ಮ ಶಕ್ತಿ ಹೆಚ್ಚಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.