ADVERTISEMENT

ಓವರ್‌ಹೆಡ್ ಟ್ಯಾಂಕ್‌, ಕ್ರೀಡಾಂಗಣ ನಿರ್ಮಾಣ ವಿವಾದ: ಅಧಿಕಾರಿಗಳಿಂದ ಜಾಗ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:50 IST
Last Updated 18 ಜುಲೈ 2024, 15:50 IST
ಇಳಕಲ್‌ಗೆ ಗುರುವಾರ ಭೇಟಿ ನೀಡಿದ ಐವರು ಅಧಿಕಾರಿಗಳ ತಂಡವು ಓವರ್‌ಹೆಡ್ ಟ್ಯಾಂಕ್ ಹಾಗೂ ಕ್ರೀಡಾಂಗಣ ಜಾಗದ ದಾಖಲೆ ಪರಿಶೀಲಿಸಿದರು
ಇಳಕಲ್‌ಗೆ ಗುರುವಾರ ಭೇಟಿ ನೀಡಿದ ಐವರು ಅಧಿಕಾರಿಗಳ ತಂಡವು ಓವರ್‌ಹೆಡ್ ಟ್ಯಾಂಕ್ ಹಾಗೂ ಕ್ರೀಡಾಂಗಣ ಜಾಗದ ದಾಖಲೆ ಪರಿಶೀಲಿಸಿದರು   

ಇಳಕಲ್: ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಓವರ್‌ಹೆಡ್ ಟ್ಯಾಂಕ್‌ ನಿರ್ಮಿಸಲಾಗುತ್ತಿರುವ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಐವರು ಅಧಿಕಾರಿಗಳ ತಂಡ ಗುರುವಾರ ಸ್ಥಳ ಪರಿಶೀಲನೆ ನಡೆಸಿದರು.

‘ತಾಲ್ಲೂಕು ಕ್ರೀಡಾಂಗಣಕ್ಕಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಹಸ್ತಾಂತರವಾದ ಜಾಗದಲ್ಲಿ ಅಧಿಕಾರಿಗಳು ಒತ್ತಡಕ್ಕೆ ಮಣಿದು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲು ಅವಕಾಶ ನೀಡಿದ್ದಾರೆ. ಅದನ್ನು ತೆರವುಗೊಳಿಸಬೇಕು. ಈ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಬೇಕು. ನಗರಸಭೆಯ ಬೇರೆ ಜಾಗದಲ್ಲಿ ನೀರಿನ ಟ್ಯಾಂಕ್ ಕಟ್ಟಲು ಕ್ರಮ ಜರುಗಿಸಬೇಕು’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಜಿಲ್ಲಾಧಿಕಾರಿಗೆ ಒತ್ತಾಯ ಮಾಡಿದ್ದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ‘ಸದರಿ ಜಾಗವು ದಾಖಲೆ ಪ್ರಕಾರ ನಗರಸಭೆಗೆ ಸೇರಿದೆ. 18 ವಿಭಾಗಗಳಿಗೆ ನಿರಂತರ ಕುಡಿಯುವ ನೀರು ಪೂರೈಸಲು ಅಗತ್ಯವಾಗಿರುವ ಓವರ್‌ಹೆಡ್ ಟ್ಯಾಂಕ್ ಅನ್ನು ಅದೇ ಜಾಗದಲ್ಲಿ ಕಟ್ಟಬೇಕು. ಸ್ಥಗಿತಗೊಂಡಿರುವ ಕಾಮಗಾರಿ ಪುನರಾರಂಭವಾಗಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದಿದ್ದರು.

ADVERTISEMENT

ಹೀಗಾಗಿ, ಜಾಗದ ಪರಿಶೀಲನೆ ನಡೆಸಿ, ವರದಿ ನೀಡಲು ಜಿಲ್ಲಾಧಿಕಾರಿ ಅವರು ಐವರು ಅಧಿಕಾರಿಗಳ ತಂಡ ರಚಿಸಿದ್ದರು. ತಂಡವು ಸರ್ಕಾರಿ ಪಿಯು ಕಾಲೇಜು, ನಗರಸಭೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಿದರು.

ಲೋಕೋಪಯೋಗಿ ಇಲಾಖೆಯ ಎಇಇ ಕಡಿವಾಲರ, ಹೆಸ್ಕಾಂ ಎಇಇ ಖಲೀಲ್ ಅಹ್ಮದ್, ಕೆಯುಸಬ್ಲ್ಯುಎಸ್ ಎಇಇ ಜಿ.ಎಂ. ಬಾಗೇನವರ, ಇಳಕಲ್ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಗುರು, ವಿಠಲ್ ಮಾಶ್ಯಾಳ ತಂಡದಲ್ಲಿದ್ದರು. ‘ಸ್ಥಳ ಪರಿಶೀಲನೆ ನಂತರ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ನಗರಸಭೆ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಟ್ಯಾಂಕ್ ಕಾಮಗಾರಿಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಕಾಮಗಾರಿ ಸ್ಥಗಿತಗೊಳಿಸಬಾರದು. ಈ ಭಾಗದ ಜನರಿಗೆ ಕುಡಿಯುವ ನೀರು ಪೂರೈಸಲು ಟ್ಯಾಂಕ್ ಅಗತ್ಯವಾಗಿದೆ’ ಎಂದು ನಗರಸಭೆ ಸದಸ್ಯರಾದ ಶೋಭಾ ಆಮದಿಹಾಳ, ಲಕ್ಷ್ಮಣ ಗುರಂ, ಮಂಜುನಾಥ ಶೆಟ್ಟರ್, ಸವಿತಾ ಆರಿ, ಗುರುದತ್ತಾತ್ರೇಯ ಗುಳೇದ, ಲಕ್ಷ್ಮಿಬಾಯಿ ಹಾದಿಮನಿ, ಬಿಜೆಪಿ ಮುಖಂಡರಾದ ವೆಂಕಟೇಶ ಪೋತಾ,ಅರವಿಂದ ಮಂಗಳೂರ, ಮಂಜುನಾಥ ಹೊಸಮನಿ, ರುದ್ರಗೌಡ ಭಾವಿಕಟ್ಟಿ, ಗಣೇಶ ಯರಡೋಣಿ, ಮಹಾಂತೇಶ ಮಠ, ಮಹಾಂತೇಶ ಕಂಪ್ಲಿ, ವಿರೇಶ ಹಿರೇಮನಿ ಒತ್ತಾಯಿಸಿದರು.

‘ಕಾಲೇಜಿನ 23 ಎಕರೆ, 25 ಗುಂಟೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ಕ್ರೀಡಾ ಇಲಾಖೆಗೆ ಪಶ್ಚಿಮ ಭಾಗದ 6 ಎಕರೆ ಕೊಟ್ಟಿದೆ. ಕ್ರೀಡಾಂಗಣ ನಿರ್ಮಿಸಿದರೆ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಅನುಕೂಲವಾಗುತ್ತದೆ’ ಎಂದು ಸಿಬಿಸಿ ಉಪಾಧ್ಯಕ್ಷ ಶಿವಾನಂದ ಮುಚಖಂಡಿ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಅಮೃತ್ ಬಿಜ್ಜಲ್, ಮಲ್ಲು ಮಡಿವಾಳರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.