ADVERTISEMENT

ಬಾದಾಮಿ | ರಂಗನಾಥ ಬೆಟ್ಟದಲ್ಲಿ ಶಿಲಾಯುಧಗಳು ಪತ್ತೆ!

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 14:27 IST
Last Updated 28 ಅಕ್ಟೋಬರ್ 2024, 14:27 IST
ಬಾದಾಮಿ ಹೊರವಲಯದ ಮೇಣಬಸದಿ ಪಕ್ಕದ ಗುಡ್ಡದ ರಂಗನಾಥ ಬೆಟ್ಟದಲ್ಲಿ ಆದಿಮಾನವರು ಬಳಸಿದ್ದ ಶಿಲಾಯುಧಗಳು ದೊರೆತಿರುವುದು
ಬಾದಾಮಿ ಹೊರವಲಯದ ಮೇಣಬಸದಿ ಪಕ್ಕದ ಗುಡ್ಡದ ರಂಗನಾಥ ಬೆಟ್ಟದಲ್ಲಿ ಆದಿಮಾನವರು ಬಳಸಿದ್ದ ಶಿಲಾಯುಧಗಳು ದೊರೆತಿರುವುದು   

ಬಾದಾಮಿ: ‘ಹೊರವಲಯದ ಮೇಣಬಸದಿ ಪಕ್ಕದ ರಂಗನಾಥ ಬೆಟ್ಟದಲ್ಲಿ ಆದಿಮಾನವರು ಬಳಸಿದ್ದ ಶಿಲಾಯುಧಗಳನ್ನು ಶೋಧ ಮಾಡಲಾಗಿದೆ’ ಎಂದು ನಾಗಪುರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಾಗೈತಿಹಾಸ ಶಾಖೆಯ ಅಧೀಕ್ಷಕ ರಮೇಶ ಮೇಲಿನಮನಿ ಹೇಳಿದರು.

ಇಲ್ಲಿನ ಶಿವಯೋಗಮಂದಿರದಲ್ಲಿ ಈಚೆಗೆ ನಾಗಪುರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಾಗೈತಿಹಾಸ ಶಾಖೆಯ ಆಶ್ರಯದಲ್ಲಿ ಉತ್ತರಪ್ರದೇಶದ ನೋಯಿಡಾ ಪಂ. ದೀನದಯಾಳ ಉಪಾಧ್ಯಾಯ ಪುರಾತತ್ವ ಸಂಸ್ಥೆಯ ಪಿಜಿಡಿಜಿ ವಿದ್ಯಾರ್ಥಿಗಳಿಗೆ ಪ್ರಾಗೈತಿಹಾಸದ ತರಬೇತಿಯ ಸಮಾರೋಪದಲ್ಲಿ ಅವರು ತಿಳಿಸಿದರು.

‘ಬಾದಾಮಿ ಬೆಟ್ಟದ ಪರಿಸರದ ಮಲಪ್ರಭಾ ನದಿ ದಂಡೆಯ ಕಾತರಗಿ ಗ್ರಾಮದ ಬೆಟ್ಟ, ಶಿವಯೋಗಮಂದಿರ, ಮಹಾಕೂಟ, ಮತ್ತು ಸಿಡಿಲುಫಡಿ ಬೆಟ್ಟದಲ್ಲಿ ವಿದ್ಯಾರ್ಥಿಗಳು ಶಿಲಾಯುಧಗಳ ಶೋಧನೆ ಮಾಡಿದ್ದಾರೆ. ಪತ್ತೆಯಾದ ಶಿಲಾಯುಧಗಳ ನಿರ್ದಿಷ್ಟ ಮತ್ತು ನಿಖರವಾದ ಕಾಲವನ್ನು ಶೋಧಿಸಬೇಕಿದೆ’ ಎಂದರು.

ADVERTISEMENT

‘ವಾರದ ಅವಧಿಯಲ್ಲಿ ಇತಿಹಾಸ ವಿದ್ವಾಂಸರಿಂದ ಪ್ರಾಗೈತಿಹಾಸ ಉಪನ್ಯಾಸ ಮತ್ತು ಬೆಟ್ಟದ ಪರಿಸರದಲ್ಲಿ ಆದಿಮಾನವರ ಪ್ರಾಚೀನ ನೆಲೆಗಳು, ಶಿಲಾಯುಧಗಳು, ಆದಿಮಾನವರು ರೂಪಿಸಿದ ಚಿತ್ರಕಲೆ ಶೋಧಿಸಿದ್ದು ಸಂತಸ ತಂದಿದೆ’ ಎಂದು ವಿದ್ಯಾರ್ಥಿನಿ ಗೀತಾಂಜಲಿ ರಾಯ್ ಅನಿಸಿಕೆ ವ್ಯಕ್ತಪಡಿಸಿದರು.

ಕೇರಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಜಿತಕುಮಾರ, ಪುಣೆ ಡೆಕ್ಕನ್ ಕಾಲೇಜಿನ ಪ್ರಾಧ್ಯಾಪಕಿ ವೀಣಾ ಮುಶ್ರೀಫ್, ಕರ್ನಾಟಕ ವಿವಿ ಪ್ರೊ.ರವಿ ಕೋರಿಶೆಟ್ಟಿ, ಕಲಬುರಗಿ ಸಹಾಯಕ ಪ್ರಾಧ್ಯಾಪಕ ಅರ್ಜುನರಾವ್, ಚೈನ್ನೈ ಮದ್ರಾಸ್ ವಿವಿ ಪ್ರಾಧ್ಯಾಪಕ ಜಿನೂ ಕೋಶಿ, ಪ್ರೊ. ಅಬಿಕ್ ಬಿಸ್ವಾಸ ಇದ್ದರು.

ಉತ್ತರಪ್ರದೇಶದ ನೋಯಿಡಾದ ಪಂ. ದೀನದಯಾಳ ಉಪಾಧ್ಯಾಯ ಪುರಾತತ್ವ ಸಂಸ್ಥೆಯ 2023-25ನೇ ಸಾಲಿನ 30ಕ್ಕೂ ಅಧಿಕ ಪಿಜಿಡಿಜಿ ವಿದ್ಯಾರ್ಥಿಗಳು ತರಬೇತಿಯಲ್ಲಿ ಹಾಜರಿದ್ದರು.

ಬಾದಾಮಿ ಸಮೀಪದ ಮಲಪ್ರಭಾ ನದಿ ದಂಡೆಯ ಕಾತರಕಿ ಗ್ರಾಮದ ಬೆಟ್ಟದಲ್ಲಿ ವಿದ್ಯಾರ್ಥಿಗಳು ಶಿಲಾಯುಧ ಶೋಧನೆಯಲ್ಲಿ ತೊಡಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.