ADVERTISEMENT

ಬಾಗಲಕೋಟೆ: ಆಧಾರ್‌ ಕಾರ್ಡ್ ತಿದ್ದುಪಡಿಗೆ ವಿದ್ಯಾರ್ಥಿಗಳ ಪರದಾಟ

ಬಸವರಾಜ ಹವಾಲ್ದಾರ
Published 5 ಡಿಸೆಂಬರ್ 2023, 7:26 IST
Last Updated 5 ಡಿಸೆಂಬರ್ 2023, 7:26 IST
ಬಾಗಲಕೋಟೆಯ ಕರ್ನಾಟಕ ಒನ್‌ ಕೇಂದ್ರದ ಮುಂದೆ ನಿಂತಿರುವ ಜನ
ಬಾಗಲಕೋಟೆಯ ಕರ್ನಾಟಕ ಒನ್‌ ಕೇಂದ್ರದ ಮುಂದೆ ನಿಂತಿರುವ ಜನ   

ಬಾಗಲಕೋಟೆ: ಆಧಾರ್ ಕಾರ್ಡ್ ತಿದ್ದುಪಡಿಗಾಗಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಆಧಾರ್‌ ಕಾರ್ಡ್ ತಿದ್ದುಪಡಿ ಕೇಂದ್ರಗಳ ಮುಂದೆ ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಲ್ಲುವಂತಾಗಿದೆ.

ವಿದ್ಯಾರ್ಥಿ ವೇತನ, ವಸತಿ ನಿಲಯ ಸೌಲಭ್ಯ, ನವೋದಯ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಸಂದರ್ಭದಲ್ಲಿ ಶಿಕ್ಷಕರು ನಮೂದಿಸಿಕೊಂಡಿರುವಂತೆಯೇ ಆಧಾರ್ ಕಾರ್ಡ್ ದಾಖಲಾತಿಗಳು ಇರಬೇಕು ಎಂಬ ನಿಯಮದ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆ ತಪ್ಪಿಸಿ ಅಲೆದಾಡುತ್ತಿದ್ದಾರೆ.

ಕರ್ನಾಟಕ ಒನ್‌ ಸೇರಿದಂತೆ ಈ ಹಿಂದೆ ಆಧಾರ್‌ ಕಾರ್ಡ್‌ಗಳನ್ನು ನೀಡುವಾಗ ಆಧಾರ್‌ ಪಡೆಯುವ ಮಕ್ಕಳ ಹೆಸರು ಮಾತ್ರ ನೀಡಿ ಆಧಾರ್‌ ಕಾರ್ಡ್‌ಗಳನ್ನು ನೀಡಲಾಗಿದೆ. ಉದಾಹರಣೆಗೆ ಹೆಸರು ಜಾಗದಲ್ಲಿ ವಿದ್ಯಾರ್ಥಿಯ ಹೆಸರಿದ್ದು, ಕೆಳಗಡೆ ತಂದೆಯ ಹೆಸರಿದ್ದರು ಸಹ, ವರ್ಗಾವಣೆ ಪ್ರಮಾಣಪತ್ರದಂತೆ ವಿದ್ಯಾರ್ಥಿಯ ಹೆಸರಿನ ಮುಂದೆಯೇ ತಂದೆಯ ಹೆಸರೂ, ಅಡ್ಡ ಹೆಸರು ಇರಬೇಕು ಎನ್ನುತ್ತಿರುವುದರಿಂದ ಕಾರ್ಡ್‌ಗಳ ತಿದ್ದುಪಡಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ADVERTISEMENT

ಹಳೆಯ ಆಧಾರ್ ಕಾರ್ಡ್, ಶಾಲೆಗಳಲ್ಲಿ ನೀಡಿರುವ ವರ್ಗಾವಣೆ ಪ್ರಮಾಣ ಪತ್ರ ಹಿಡಿದುಕೊಂಡು ವಿದ್ಯಾರ್ಥಿಗಳು ಪೋಷಕರೊಂದಿಗೆ ಕೇಂದ್ರದಿಂದ ಕೇಂದ್ರಕ್ಕೆ ಅಲೆದಾಡುತ್ತಿದ್ದಾರೆ.

ಬಾಗಲಕೋಟೆಯಲ್ಲಿರುವ ಕರ್ನಾಟಕ ಒನ್‌ ಸೆಂಟರ್ ಮುಂದೆ ಬೆಳಿಗ್ಗೆ ಆರು ಗಂಟೆಗೆ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪೋಷಕರೊಂದಿಗೆ ಪಾಳಿ ಹಚ್ಚಿರುತ್ತಾರೆ. ಒಂದು ದಿನಕ್ಕೆ 60 ಮಂದಿಯ ಕಾರ್ಡ್ ಮಾತ್ರ ತಿದ್ದುಪಡಿ ಸಾಧ್ಯವಾಗುವುದರಿಂದ ಉಳಿದವರು ಮತ್ತೇ ಮರು ದಿನ ಬರಬೇಕು. ನೆಟ್‌ವರ್ಕ್‌ ಸಮಸ್ಯೆಯಾದರೆ, ಅವರದ್ದೂ ಆಗುವುದಿಲ್ಲ.

ಕಾರ್ಡ್‌ನಲ್ಲಿ 15 ವರ್ಷ ಪೂರ್ಣಗೊಳಿಸಿದವರ ಫೋಟೊ, ಫಿಂಗರ್‌ ಪ್ರಿಂಟ್‌ ಅಪ್‌ಡೇಟ್‌ ಮಾಡಬೇಕು ಎಂದಿದೆ. ಇದು ಅವರಿಗೆ ಗೊತ್ತಿರದ ಕಾರಣ ಮಾಡಿಲ್ಲ. ಈಗ ಹೆಸರು ತಿದ್ದುಪಡಿಗೆ ಬಂದಾಗಲೇ ಅಪ್‌ಡೇಟ್ ಮಾಡಿ, ಅಪ್‌ಡೇಟ್ ಆದ ನಂತರ ವಾರದಿಂದ ಹದಿನೈದು ದಿನ ಬಿಟ್ಟು ಬರುವಂತೆ ವಾಪಸ್ ಕಳುಹಿಸಲಾಗುತ್ತಿದೆ.

ಶಾಲೆಗಳವರು ನೋಂದಣಿ ಆಧಾರದ ಮೇಲೆ ಹೆಸರು, ತಂದೆ ಹೆಸರು, ಅಡ್ಡ ಹೆಸರು ಸೇರ್ಪಡೆಗೊಳಿಸುತ್ತಿದ್ದಾರೆ. ಇದು ಬಹಳಷ್ಟು ಉದ್ದವಾಗುವುದರಿಂದ ಬ್ಯಾಂಕ್ ಸೇರಿದಂತೆ ವಿವಿಧೆಡೆ ಅರ್ಜಿ ತುಂಬಲೂ ಅಡ್ಡಿಯಾಗುತ್ತಿದೆ. 

ಎಸ್ಸೆಸ್ಸೆಲ್ಸಿ ಮಾರ್ಕ್ಸ್‌ ಕಾರ್ಡ್‌ನಲ್ಲಿ ದಾಖಲಾಗುವ ಹೆಸರೇ ಅಂತಿಮವಾಗುತ್ತದೆ. ಆದರೆ, ಈಗ ಶಾಲೆಗಳವರು ತಂದೆ ಹೆಸರನ್ನೂ ವಿದ್ಯಾರ್ಥಿ ಹೆಸರ ಮುಂದೆ ಸೇರ್ಪಡೆಗೊಳಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ಅಂಕ ಪಟ್ಟಿಗಳಲ್ಲಿ ತಂದೆ–ತಾಯಿ ಹೆಸರು ಕೆಳಗಡೆ ಪ್ರತ್ಯೇಕವಾಗಿ ಬರುತ್ತಿದೆ. ಹಾಗಿದ್ದಾಗ ವಿದ್ಯಾರ್ಥಿ ಹೆಸರಿನ ಮುಂದೆಯೂ ತಂದೆ ಹೆಸರು ಬೇಕಾ ಎಂಬುದು ಪೋಷಕರ ಪ್ರಶ್ನೆ.

ಶಾಲಾ ದಾಖಲಾತಿ ಹಾಗೂ ಆಧಾರ್‌ ಕಾರ್ಡ್‌ನಲ್ಲಿ ಹಲವು ವಿದ್ಯಾರ್ಥಿಗಳ ಹೆಸರಿನ ಮುಂದೆ ತಂದೆ ಹಾಗೂ ಅಡ್ಡ ಹೆಸರು ಇಲ್ಲ. ಇದರಿಂದಾಗಿ ಅವರ ಖಾತೆಗಳಿಗೆ ಸರ್ಕಾರದ ಸೌಲಭ್ಯಗಳ ಹಣ ಜಮಾ ಮಾಡಲು ಆಗುತ್ತಿಲ್ಲ. ಆದ್ದರಿಂದ ಎಲ್ಲರೂ ಒಂದೇ ತೆರನಾಗಿ ಮಾಡಲು ತಿಳಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಡಿಡಿಪಿಐ ಬಿ.ಕೆ. ನಂದನೂರ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶಾಲೆಗಳಲ್ಲಿ ಆಧಾರ್‌ ಕಾರ್ಡ್‌ಗಳ ತಿದ್ದುಪಡಿ ಅಭಿಯಾನ ಮಾಡುವಂತೆ ಮನವಿ ಮಾಡಲಾಗಿದೆ
ಬಿ.ಕೆ. ನಂದನೂರ ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.