ADVERTISEMENT

ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಸಾಧಕನಿಗೆ ಸುಧಾ ಮೂರ್ತಿ ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 16:42 IST
Last Updated 23 ಆಗಸ್ಟ್ 2020, 16:42 IST
   

ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಇನ್ಫೊಸಿಸ್ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ಸಹಾಯ ಹಸ್ತ ಚಾಚಿದ್ದಾರೆ.

ಜಮಖಂಡಿ ತಾಲ್ಲೂಕಿನ ಖಾಜಿ ಬೀಳಗಿ ಗ್ರಾಮದ ಬಡ ವಿದ್ಯಾರ್ಥಿ ಸಂಜಯನಿಗೆ ನೆರವು ಸಿಗಲಿದೆ. ರಾಯಬಾಗ ತಾಲ್ಲೂಕಿನ ಹಾರೂಗೇರಿಯ ವಿಶ್ವಭಾರತಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಜಯ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 617 ಅಂಕ ಪಡೆದಿದ್ದಾನೆ. ರಾಜ್ಯಕ್ಕೆ 7ನೇ ರ್‍ಯಾಂಕ್‌ ಗಳಿಸಿದ್ದಾನೆ.

ಈತನ ಸಾಧನೆ ಬಗ್ಗೆ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದರು. ವಿದ್ಯಾರ್ಥಿಯ ಸಾಧನೆ ನೋಡಿದ ಸುಧಾ ಮೂರ್ತಿ ಆತನ ಶಿಕ್ಷಣಕ್ಕೆ ಪ್ರತಿ ವರ್ಷ 50 ಸಾವಿರ ರೂಪಾಯಿಯಂತೆ ಮೂರು ವರ್ಷದ 1 ಲಕ್ಷ 50 ಸಾವಿರ ರೂಪಾಯಿ ಸಹಾಯ ನೀಡಲಿದ್ದಾರೆ. ಈ ಬಗ್ಗೆ ಸುರೇಶ್‌ ಕುಮಾರ್ ವಿವರ ಹಂಚಿಕೊಂಡಿದ್ದಾರೆ.

ADVERTISEMENT

ಸಂಜಯ ತಂದೆ ಮಲ್ಲಿಕಾರ್ಜುನ ರೈತರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದಾರೆ. ಸಂಜಯ ಪುಟ್ಟ ಗುಡಿಸಲಿನಲ್ಲಿಯೇ ವಿದ್ಯಾಭ್ಯಾಸ ಕೈಗೊಂಡು ಉತ್ತಮ ಸಾಧನೆ ಪ್ರದರ್ಶಿಸಿದ್ದಾನೆ. ಆತ ಅಭ್ಯಸಿಸಿರುವ ಶಾಲೆಯ ಆಡಳಿತ ಮಂಡಳಿ ಕೂಡ ಶಿಕ್ಷಣಕ್ಕೆ ನೆರವಾಗುವ ಭರವಸೆ ನೀಡಿದೆ.

ಇದರ ಜತೆಗೆ ಸುಧಾ ಮೂರ್ತಿ ಇನ್ನೂ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಜಮಖಂಡಿ ತಾಲ್ಲೂಕಿನ 250 ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಒದಗಿಸಲು ಆರ್ಥಿಕ ನೆರವು ನೀಡಲಿದ್ದಾರೆ. ಸುಧಾ ಮೂರ್ತಿ ಅವರ ತಂದೆಯ ಊರು ಸಾವಳಗಿಯಾಗಿದ್ದು, ಅವರು ತಮ್ಮ ತಾಲ್ಲೂಕಿನ ವಿದ್ಯಾರ್ಥಿಗಳಿಗಾಗಿ ನೆರವು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.