ADVERTISEMENT

ಮಹಾಲಿಂಗಪುರ |ಪ್ರವಾಹ ನೀರಲ್ಲಿ ಕಬ್ಬಿನ ಬೆಳೆ: ಇಳುವರಿ ಮೇಲೆ ಪರಿಣಾಮ

ಆತಂಕದಲ್ಲಿ ಕಬ್ಬುಬೆಳೆಗಾರರು

ಪ್ರಜಾವಾಣಿ ವಿಶೇಷ
Published 31 ಜುಲೈ 2024, 7:16 IST
Last Updated 31 ಜುಲೈ 2024, 7:16 IST
ನಂದಗಾಂವ ಗ್ರಾಮದಲ್ಲಿ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿರುವ ಕಬ್ಬಿನ ಬೆಳೆ
ನಂದಗಾಂವ ಗ್ರಾಮದಲ್ಲಿ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿರುವ ಕಬ್ಬಿನ ಬೆಳೆ   

ಮಹಾಲಿಂಗಪುರ: ರೈತರ ಜೀವನಾಧಾರವಾದ ಕಬ್ಬು ಬೆಳೆ ಘಟಪ್ರಭಾ ನದಿ ಪ್ರವಾಹದ ನೀರಲ್ಲಿ ನಿಂತಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಧ್ಯಯನ ಪ್ರಕಾರ 5 ದಿನಗಳ ನಂತರ ನೀರಿನಲ್ಲಿ ನಿಂತ ಕಬ್ಬಿನ ಇಳುವರಿ ಶೇ 15ರಿಂದ 20ರಷ್ಟು, 10 ದಿನಗಳ ನಂತರ ಶೇ 30-60ರಷ್ಟು ಕಡಿಮೆಯಾಗುತ್ತದೆ. ಸದ್ಯ ಪ್ರವಾಹ ಇಳಿಮುಖವಾಗದೇ ಇದ್ದರೆ ಕಬ್ಬಿನ ಇಳುವರಿ ಕಡಿಮೆಯಾಗುವ ಆತಂಕ ರೈತರಲ್ಲಿದೆ. ಕೆಲ ರೈತರದ್ದು ಕಬ್ಬಿನ ಬೆಳೆ ಹಾಳಾಗುತ್ತಿರುವುದು ಒಂದೆಡೆಯಾದರೆ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವುದು ಮತ್ತೊಂದೆಡೆಯಾಗಿದೆ.

ಈ ಭಾಗದ ಘಟಪ್ರಭಾ ನದಿ ತೀರದಲ್ಲಿ ಯಥೇಚ್ಛವಾಗಿ ಕಬ್ಬು ಬೆಳೆಯಲಾಗಿದೆ. 9 ರಿಂದ 14 ತಿಂಗಳಿನ ಈ ಬೆಳೆಯನ್ನು ಹಚ್ಚ ಕಬ್ಬು, ಕುಳೆ ಕಬ್ಬು ಮಾದರಿಯಲ್ಲಿ ರೈತರು ಬೆಳೆದಿದ್ದಾರೆ. ಸಾಮಾನ್ಯವಾಗಿ ಈಗಿರುವ ಕಬ್ಬನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಿನ ನಂತರ ಬೆಳೆಯಲಾಗಿದೆ. ಘಟಪ್ರಭೆಯ ಪ್ರವಾಹದಿಂದಾಗಿ ಕಳೆದ ಐದಾರು ದಿನದಿಂದ ಕಬ್ಬು ನೀರಲ್ಲೇ ನಿಂತಿದೆ.

ADVERTISEMENT

‘ಪ್ರವಾಹ ಬಾಧಿತ ನಂದಗಾಂವದಲ್ಲಿ 380 ಹೆಕ್ಟೇರ್, ಢವಳೇಶ್ವರದಲ್ಲಿ 800 ಹೆಕ್ಟೇರ್ ಹಾಗೂ ಮಾರಾಪುರದಲ್ಲಿ 110 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಕಬ್ಬು ನೀರಲ್ಲಿ ನಿಂತಿದೆ. ಶೇ 33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾದರೆ ರಾಜ್ಯ ಸರ್ಕಾರ, ಶೇ 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ರೈತರಿಗೆ ಪರಿಹಾರ ದೊರೆಯಲಿದೆ’ ಎಂದು ಮುಧೋಳ ಕೃಷಿ ಅಧಿಕಾರಿ ಟಿ.ಎಂ.ಡಾಂಗೆ ಮಾಹಿತಿ ನೀಡಿದರು.

‘ಬೇಸಿಗೆಯಲ್ಲಿ ಕಬ್ಬಿಗೆ ನೀರಿನ ಸಮಸ್ಯೆ ಇತ್ತು. ಸಾಲು ಬಿಟ್ಟು ಸಾಲಿಗೆ ನೀರು ಹಾಯಿಸಿ ಬೆಳೆ ಉಳಿಸಿಕೊಂಡು ಬಂದಿದ್ದೇವೆ. ಈಗ ನದಿ ನೀರಲ್ಲಿ ಬೆಳೆ ನಿಂತಿದೆ. ಈ ಬೆಳೆಯನ್ನು ನಂಬಿಕೊಂಡು ಜೀವನ ಮಾಡುತ್ತೇವೆ. ಅದೇ ಹಾಳಾದರೆ ಜೀವನ ನಡೆಸುವುದು ಹೇಗೆ’ ಎಂದು ಕಬ್ಬು ಬೆಳೆದ ರೈತರು ಅಳಲು ತೋಡಿಕೊಂಡರು.

‘ಸಾಮಾನ್ಯವಾಗಿ ಕಬ್ಬಿನ ತುದಿ ನಾಲ್ಕು ದಿನಗಳಿಗಿಂತ ಹೆಚ್ಚಿನ ಅವಧಿ ಮುಳುಗಿದಾಗ ಬೆಳವಣಿಗೆಯ ತುದಿ ನಾಶವಾಗುತ್ತದೆ. ಒಂದು ವೇಳೆ ಬೆಳವಣಿಗೆಯ ತುದಿಯು ಕಂದು ಬಣ್ಣಕ್ಕೆ ತಿರುಗದೆ ಹಾಗೆಯೆ ಉಳಿದರೆ ಪುನಃ ಕಬ್ಬು ಬೆಳೆಯುವ ಸಾಧ್ಯತೆ ಇರುತ್ತದೆ ಹಾಗೂ ಬೆಳವಣಿಗೆಯ ತುದಿ ನಾಶವಾದಾಗ ಕಬ್ಬಿನ ಬೆಳವಣಿಗೆಯು ಮಗ್ಗಲಿನ ಕಣ್ಣುಗಳು ಮೊಳಕೆ ಒಡೆಯುವ ರೂಪ ಪಡೆಯುತ್ತದೆ’ ಎನ್ನುತ್ತಾರೆ ಮಹಾಲಿಂಗಪುರದ ಕೃಷಿ ತಜ್ಞ ಎಂ.ವೈ.ಕಟ್ಟಿ.

‘ಕಬ್ಬು 4-6 ತಿಂಗಳ ಬೆಳೆಯಿದ್ದಾಗ ಕಬ್ಬು ಪ್ರವಾಹಕ್ಕೆ ಒಳಗಾಗಿ ಸಂಪೂರ್ಣ ಮುಳುಗಿದರೆ ಅಂತಹ ಕಬ್ಬು ಶೇ 100 ರಷ್ಟು ಹಾನಿಯಾಗುವ ಸಾಧ್ಯತೆ ಇದೆ. ಕಬ್ಬಿನ ವಯಸ್ಸು 7 ತಿಂಗಳಿಗಿಂತ ಹೆಚ್ಚಿನ ವಯಸ್ಸು ಹೊಂದಿ ಉತ್ತಮ ಬೆಳವಣಿಗೆಯಾದಲ್ಲಿ ಕಬ್ಬಿನ ಬೆಳೆಯು ಪ್ರವಾಹಕ್ಕೆ ಸಂಪೂರ್ಣವಾಗಿ ಮುಳುಗಿದರೆ ಅಂತಹ ಕಬ್ಬಿನ ಇಳುವರಿ ಹಾನಿಯಾಗುವ ಪ್ರಮಾಣ ಕಡಿಮೆ ಇರುತ್ತದೆ’ ಎನ್ನುತ್ತಾರೆ ಕೃಷಿ ತಜ್ಞರು.
 

ನಂದಗಾಂವ ಗ್ರಾಮದಲ್ಲಿ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿರುವ ಕಬ್ಬಿನ ಬೆಳೆ
ಪ್ರವಾಹದಲ್ಲಿ ಭಾಗಶಃ ಮುಳುಗಿದ ಕಬ್ಬಿನ ಬೆಳೆಯಲ್ಲಿ ಕೆಳ ಹಂತದ ಕಬ್ಬಿನ ಗಣಿಕೆಯ ತೊಗಟೆ ಭಾಗದಲ್ಲಿ ಬಿಳಿ ಬೇರು ಚಿಗುರುತ್ತವೆ. ಇಂಥ ಬೆಳೆಯಲ್ಲಿ ಸೈನಿಕ ಹುಳುವಿನ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇದೆ
–ಎಂ.ವೈ.ಕಟ್ಟಿ ಕೃಷಿ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.