ಬಾಗಲಕೋಟೆ: ಒಂದೆಡೆ ರಾಜ್ಯ ಸರ್ಕಾರ ನ.8ರಿಂದಲೇ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಅರೆಯುವಿಕೆ ಆರಂಭಿಸಲು ಸೂಚಿಸಿದ್ದರೆ, ಇನ್ನೊಂದೆಡೆ ಜಿಲ್ಲೆಯ ರೈತ ಮುಖಂಡರು ಹಿಂದಿನ ಬಾಕಿ ಹಾಗೂ ಬೆಲೆ ಘೋಷಣೆ ಮಾಡದ ಹೊರತು ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಹೋರಾಟ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳಿವೆ. 1.33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕಳೆದ ವರ್ಷ ಬರಗಾಲದ ನಡುವೆಯೂ 1.72 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿತ್ತು. ಈ ಬಾರಿ ಮಳೆ ಉತ್ತಮವಾಗಿ ಆಗಿರುವುದರಿಂದ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ನುರಿಸಲು ಸಿಗಲಿದೆ. ಅದಕ್ಕೆ ಸಕ್ಕರೆ ಕಾರ್ಖಾನೆಗಳು ಸಿದ್ಧವಾಗಿವೆ.
ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮಾತ್ರ ಬಂದ್ ಆಗಿತ್ತು. ಈ ವರ್ಷ ಅದನ್ನೂ ಲೀಸ್ ಮೇಲೆ ನೀಡಿರುವುದರಿಂದ ಕಬ್ಬು ಅರೆಯಲು ಅದೂ ಸಜ್ಜಾಗಲಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿನ 79 ಸಕ್ಕರೆ ಕಾರ್ಖಾನೆಗಳಿವೆ. ಕಳೆದ ವರ್ಷ 5.29 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ, 46.68 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ. ಈ ವರ್ಷ ಅದು ಹೆಚ್ಚಾಗುವ ನಿರೀಕ್ಷೆ ಇದ್ದು, 52 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸುವ ನಿರೀಕ್ಷೆಯಿದೆ.
10.25 ಇಳುವರಿ ಹೊಂದಿರುವ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ₹3,400 ನಿಗದಿ ಮಾಡಲಾಗಿದೆ. ಆದರೆ, ರೈತರು ಹೆಚ್ಚಿನ ದರ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಅದಕ್ಕಾಗಿಯೇ ಬೆಲೆ ಘೋಷಿಸಿದ ನಂತರವೇ ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮಾಡಬೇಕು ಎಂದು ಮುಧೋಳದಲ್ಲಿ ಪ್ರತಿಭಟನೆ ಮಾಡಿದ್ದಾರೆ.
‘2018–19ನೆ ಸಾಲಿನ ಹಾಗೂ 2021–22ನೇ ಸಾಲಿನ ಪ್ರತಿ ಟನ್ ಕಬ್ಬಿಗೆ ₹62 ಬಾಕಿಯನ್ನು ಪಾವತಿಸುವುದಿದೆ. ಅದನ್ನು ಕೂಡಲೇ ಪಾವತಿ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಆಗ್ರಹಿಸಿದರು.
‘ಕೇಂದ್ರ ಸರ್ಕಾರ ಘೋಷಿಸಿರುವ ಎಫ್‌ಆರ್‌ಪಿ ದರ ಒಪ್ಪುವುದಿಲ್ಲ. ಅದರ ಮೇಲೆ ಹೆಚ್ಚಿನ ದರ ನಿಗದಿ ಮಾಡಬೇಕು. ಕಾರ್ಖಾನೆಗಳವರು ದರ ಘೋಷಿಸಬೇಕು. ಇಲ್ಲವೇ ಈ ಕುರಿತು ಸಭೆ ಕರೆದು ರೈತರೊಂದಿಗೆ ಚರ್ಚಿಸಬೇಕು. ಆ ನಂತರವಷ್ಟೇ ಕಾರ್ಖಾನೆಗಳ ಆರಂಭಕ್ಕೆ ಅವಕಾಶ ನೀಡಲಾಗುವುದು’ ಎಂದು ಅವರು ತಿಳಿಸಿದರು.
‘ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು, ನ.13 ರಂದು ಜಿಲ್ಲಾ ಉಸ್ತುವಾರಿ ಸಚಿವರು ಸಕ್ಕರೆ ಕಾರ್ಖಾನೆ ಮಾಲೀಕರು, ರೈತರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲಿಯವರೆಗೆ ಕಾದು ನೋಡುತ್ತೇವೆ. ಸಭೆಯ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.
ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ದರ ನೀಡುವುದಕ್ಕೆ ಬದ್ಧವಾಗಿ ಕಬ್ಬು ನುರಿಸುವಿಕೆ ಆರಂಭಿಸಲು ಸಿದ್ಧವಾಗಿವೆ. ಈಗಾಗಲೇ ಮಹಾರಾಷ್ಟ್ರ ರಾಜ್ಯದಿಂದ ಬಂದಿರುವ ಕಬ್ಬು ಕಡಿಯುವ ಗ್ಯಾಂಗ್‌ಗಳು ಕಬ್ಬು ಕತ್ತರಿಸಲು ಆರಂಭಿಸಿವೆ. ಶೀಘ್ರವೇ ಸರ್ಕಾರ ಮಧ್ಯ ಪ್ರವೇಶಿಸಿ, ಸಮಸ್ಯೆಗೆ ಪರಿಹಾರ ನೀಡಬೇಕಿದೆ.
ದರ ನಿಗದಿ ಅಂತಿಮಗೊಳ್ಳುವವರೆ ಕಾರ್ಖಾನೆ ಆರಂಭಿಸಬಾರದು. ಆರಂಭಿಸಿ ಅನಾಹುತಗಳಾದರೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ.ಬಸವಂತ ಕಾಂಬಳೆ ಜಿಲ್ಲಾ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.