ADVERTISEMENT

ಗೋವಿನಜೋಳ ಬೀಜದಲ್ಲಿ ಮಿಶ್ರಣ ಶಂಕೆ | ಒಂದೇ ದಂಟಿನಲ್ಲಿ 6 ತೆನೆ: ರೈತ ಕಂಗಾಲು

ಪ್ರಕಾಶ ಬಾಳಕ್ಕನವರ
Published 24 ಆಗಸ್ಟ್ 2024, 5:04 IST
Last Updated 24 ಆಗಸ್ಟ್ 2024, 5:04 IST
ಗೋವಿನ ಜೋದ ಬೆಳೆಯ ಒಂದು ದಂಟಿನಲ್ಲಿ 5 ತೆನೆಗಳು ಬಿಟ್ಟಿರುವ ಚಿತ್ರ.
ಗೋವಿನ ಜೋದ ಬೆಳೆಯ ಒಂದು ದಂಟಿನಲ್ಲಿ 5 ತೆನೆಗಳು ಬಿಟ್ಟಿರುವ ಚಿತ್ರ.   

ರಾಂಪುರ: ಸಮೀಪದ ಬೇವೂರ ಗ್ರಾಮದ ರೈತರಿಬ್ಬರ ಹೊಲದಲ್ಲಿ ಬೆಳೆಯಲಾದ ಗೋವಿನಜೋಳದ ಒಂದೇ ದಂಟಿನಲ್ಲಿ 5-6 ತೆನೆಗಳು ಕಾಣಿಸಿಕೊಂಡಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

ಸಾಮಾನ್ಯವಾಗಿ ಒಂದು ದಂಟಿನಲ್ಲಿ 1 ಅಥವಾ 2 ತೆನೆ ಇರಬೇಕು. ಇದರಿಂದ ತೆನೆ ತುಂಬ ಕಾಳುಗಳಾಗಿ ಉತ್ತಮ ಫಸಲು ಬರುತ್ತದೆ. ಆದರೆ ಈಗ ಒಂದು ದಂಟಿನೊಳಗೆ 6 ತೆನೆಗಳು ಬಿಡುವುದರಿಂದ ಅದರಲ್ಲಿ ಕಾಳುಗಳೇ ಬೆಳೆಯದೇ ಫಸಲು ಸಹ ಬರುವುದಿಲ್ಲ.

ಬೇವೂರಿನ ಪ್ರವೀಣ ವೆಂಕಪ್ಪ ಹಚ್ಚೊಳ್ಳಿ ಹಾಗೂ ಪುಂಡಲೀಕಪ್ಪ ಕೋಟಿ ಎಂಬಿಬ್ಬರು ರೈತರ ಹೊಲದಲ್ಲಿ ಬೆಳೆಯಲಾದ ಗೋವಿನಜೋಳದ ಬೆಳೆಯಲ್ಲಿ ಬಹುತೇಕ ದಂಟುಗಳಲ್ಲಿ 4, 5 ಹಾಗೂ 6 ತೆನೆಗಳು ಕಾಣಿಸಿಕೊಂಡಿದ್ದು, ಅವರೀಗ ಚಿಂತಾಕ್ರಾಂತರಾಗಿದ್ದಾರೆ.

ADVERTISEMENT

ಪುಂಡಲೀಕಪ್ಪ ಕೋಟಿ 10 ಎಕರೆಯಲ್ಲಿ ಗೋವಿನಜೋಳ ಬೆಳೆದಿದ್ದರೆ, ಪ್ರವೀಣ ಹಚ್ಚೊಳ್ಳಿ 5 ಎಕರೆಯಲ್ಲಿ ಬೆಳೆದಿದ್ದಾರೆ. ಇಬ್ಬರೂ ರೈತರು ಬಾಗಲಕೋಟೆಯ ರೈತ ಸಂಪರ್ಕ ಕೇಂದ್ರದಿಂದಲೇ ಪಯೋನಿಯರ್ -3436 ಕಂಪನಿಯ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದರು. ಇಬ್ಬರೂ ರೈತರು ಈಗ ಕೃಷಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದ್ದು, ಈ ಬಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಿ ತಜ್ಞ ವಿಜ್ಞಾನಿಗಳನ್ನು ಕಳುಹಿಸುವಂತೆ ಕೋರುವುದಾಗಿ ತಿಳಿಸಿದ್ದಾರೆ.

ಕಳಪೆ ಅಥವಾ ಮಿಶ್ರಣ ಬೀಜದ ಕಾರಣದಿಂದ ಹೀಗೆ ಆಗುತ್ತದೆ. ಇದರಿಂದ ರೈತರಿಗೆ ನಷ್ಟವೇ ಆಗಲಿದೆ ಎನ್ನಲಾಗಿದೆ. ಹೀಗಾಗಿ ರೈತರು ತಮಗೆ ಪರಿಹಾರ ಕೊಡಬೇಕು ಇಲ್ಲದಿದ್ದರೆ ಕೋರ್ಟ್‌ ಅಥವಾ ಗ್ರಾಹಕರ ವೇದಿಕೆಗೆ ಮೊರೆ ಹೋಗಲಿದ್ದೇವೆ ಎಂದು ತಿಳಿಸಿದ್ದಾರೆ.

ಗೋವಿನ ಜೋಳದ ಬೆಳೆಯ ಒಂದು ದಂಟಿನಲ್ಲಿ 6 ತೆನೆಗಳಿವೆ.

‘ರೈತ ಸಂಪರ್ಕ ಕೇಂದ್ರದಲ್ಲಿ ಪಯೋನಿಯರ್ ಕಂಪನಿಯ ಗೋವಿನ ಜೋಳ ಬೀಜಗಳನ್ನೇ ವಿತರಿಸಲಾಗಿದ್ದು, ಇದುವರೆಗೂ ಯಾರಿಂದಲೂ ದೂರು ಬಂದಿಲ್ಲ. ಆದರೆ ಬೇವೂರಿನ ಇಬ್ಬರು ರೈತರಿಗೆ ನೀಡಲಾದ ಬೀಜಗಳು ಯಾವ ಲಾಟ್ ನಂಬರಿನವುಗಳು ಎಂಬುದನ್ನು ಪರಿಶೀಲನೆ ಮಾಡಬೇಕಿದೆ. ಇದೇ ಲಾಟ್‌ನ ಬೀಜಗಳನ್ನು ಖರೀದಿಸಿದ ಬೇರೆ ರೈತರ ಬೆಳೆ ಸಹ ಪರೀಕ್ಷಿಸಿ ಮಾಹಿತಿ ಪಡೆಯಬೇಕಿದೆ’ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಬೇವೂರಿನ ರೈತ ಪ್ರವೀಣ ಹಚ್ಚೊಳ್ಳಿ ಅವರ ಹೊಲದಲ್ಲಿ ಬೆಳೆದ ಗೋವಿನ ಜೋಳದ ಬೆಳೆಯ ನೋಟ.

ವಿಜ್ಞಾನಿಗಳಿಂದ ಪರಿಶೀಲನೆ

ಬೇವೂರಿನ ಇಬ್ಬರೂ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ವಿಜ್ಞಾನಿಗಳನ್ನು ಕರೆಸುವಂತೆ ಕೋರಲಾಗಿದೆ. ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು

- ಮಂಜುನಾಥ್ ಸಹಾಯಕ ಕೃಷಿ ನಿರ್ದೇಶಕರು ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.