ಬಾದಾಮಿ: ಉತ್ತರದ ನೈಸರ್ಗಿಕ ಬೆಟ್ಟದ ಬಾವನ್ ಬಂಡೆ ಕೋಟೆಯ ಮೇಲಿರುವ ಸೂಫಿ ಸಂತ ಹಜರತ್ ಸೈಯದ್ ಬಾದಷಾ ದರ್ಗಾದ ಉರುಸ್‌ನ್ನು ಸ್ಥಳೀಯ ಹಜರತ್ ಸೈಯದ್ ಬಾದಷಾ (ರ.ಹ.) ದರ್ಗಾ ಶಕ್ತಿಪೀಠ ಆಶ್ರಯದಲ್ಲಿ ಹಿಂದು-ಮುಸ್ಲಿಮರು ಭಾವೈಕ್ಯದೊಂದಿಗೆ ಸಂಭ್ರಮದಿಂದ ಆಚರಿಸಲಿದ್ದಾರೆ.
ಚಾಲುಕ್ಯರ ಕಾಲದಿಂದಲೂ ಬಾದಾಮಿ ಪರಿಸರವು ಸೌಹಾರ್ದದ ಬೀಡು ಎಂದು ತಿಳಿಯಲು ಇಲ್ಲಿನ ಸ್ಮಾರಕಗಳೇ ಸಾಕ್ಷಿಯಾಗಿವೆ. ಚಾಲುಕ್ಯರು ಮೂಲತಃ ವೈಷ್ಣವರಾಗಿದ್ದರೂ ಪರಧರ್ಮ ಸಹಿಷ್ಣುಗಳಾಗಿದ್ದರು. ಶೈವ, ಜೈನ ಮತ್ತು ಬೌದ್ಧ ಧರ್ಮದ ಅನೇಕ ಮೂರ್ತಿಶಿಲ್ಪಗಳನ್ನು ಸ್ಮಾರಕಗಳಲ್ಲಿ ವೀಕ್ಷಿಸಬಹುದಾಗಿದೆ.
ಕ್ರಿ.ಶ 5ನೇ ಶತಮಾನದಿಂದ ಇಲ್ಲಿಯವರೆಗೂ ಚಾಲುಕ್ಯರ ನಾಡಿನಲ್ಲಿ ಸರ್ವಧರ್ಮದ ಜನತೆ ಭಾವೈಕ್ಯದಿಂದ ಬದುಕುತ್ತಿದ್ದಾರೆ. ಇಲ್ಲಿನ ಗ್ರಾಮದೇವತೆ, ಬನಶಂಕರಿದೇವಿ ಜಾತ್ರೆ ಮತ್ತು ಮೊಹರಂ ಆಚರಣೆಗಳು ಸಾಕ್ಷಿಯಾಗಿವೆ.
ಹಜರತ್ ಸೈಯದ್ ಬಾದಷಾ ಗದ್ದುಗೆ ಪಕ್ಕದಲ್ಲಿ ಶರಣ ಶಿವಪ್ಪಯ್ಯಜ್ಜ ಗದ್ದುಗೆ ಇದ್ದು, ಸಮಕಾಲೀನ ಸೂಫಿ ಸಂತ ಶರಣರಾಗಿದ್ದರು. ಸರ್ವಧರ್ಮ ಸಮನ್ವಯದ ಸ್ಥಳವಾಗಿದೆ. ಹಿಂದು-ಮುಸ್ಲಿಂ ಸೌಹಾರ್ದದ ಜಾಗೃತ ಕ್ಷೇತ್ರದಲ್ಲಿ ಅಧಿಕ ಭಕ್ತರು ಪ್ರತಿ ಗುರುವಾರ ಗದ್ದುಗೆಯ ದರ್ಶನಕ್ಕಾಗಿ ಆಗಮಿಸುವರು.
ಭಕ್ತರು ಬೆಟ್ಟದ ಮೇಲಿರುವ ದರ್ಗಾಕ್ಕೆ ಹೋಗುವಾಗ ‘ಸೈಯದ್ ಬಾಷಾ ಕಿ ದೋಸ್ತರಹೋ ಧೀನ’ ಎಂದು ಭಕ್ತಿಯಿಂದ ಘೋಷಿಸುತ್ತ ದರ್ಗಾಕ್ಕೆ ತಲುಪುವರು.
‘16ನೇ ಶತಮಾನದಲ್ಲಿ ಸೈಯದ್ ಬಾದಷಾ ಮತ್ತು ಶಿವಪ್ಪಯ್ಯಜ್ಜ ಸಮಕಾಲೀನ ಶರಣರಾಗಿದ್ದರು. ತಮ್ಮ ತಪಸ್ಸು ಮತ್ತು ಧ್ಯಾನದಿಂದ ಮನುಕುಲದ ಉದ್ಧಾರ ಮಾಡಿದರು’ ಎಂದು ತಿಪ್ಪಣ್ಣ ನೀಲಗುಂದ ಹೇಳುವರು.
‘ಜನರ ಬದುಕಿನಲ್ಲಿ ಏನಾದರೂ ಕೌಟುಂಬಿಕ ತೊಂದರೆಗಳು, ರೋಗ ರುಜಿನಗಳು ಬಂದರೆ ತಮ್ಮ ತಪಸ್ಸು ಮತ್ತು ಧ್ಯಾನ ಶಕ್ತಿಯಿಂದ ಪರಿಹಾರ ಮಾಡುತ್ತಿದ್ದರು. ಸಂತಾನ ಭಾಗ್ಯ ಪ್ರಾಪ್ತಿ ಮಾಡುತ್ತಿದ್ದರು’ ಎಂದು ಗೋಪಾಲ ಕೋಟನಕರ ತಿಳಿಸಿದರು.
16ನೇ ಶತಮಾನದಲ್ಲಿ ವಿಜಯಪುರ ಜಿಲ್ಲೆಗೆ ಮಳೆಯಾಗದೇ ಬರ ಬಿದ್ದಾಗ ಎರಡನೇ ಆದಿಲಶಾಹಿಯು ಉಭಯ ಶರಣರ ಹತ್ತಿರ ಮಳೆ ಕೇಳಲು ಕುದುರೆ ಮೇಲೆ ಬಂದಿದ್ದನಂತೆ, ಶರಣರು ಊರನ್ನು ದಾಟುವುದರಲ್ಲಿಯೇ ಮಳೆ ಬರುತ್ತಿದೆ ಎಂದು ಹೇಳಿದರಂತೆ, ಮುಂದೆ ಹೋಗುವಷ್ಟರಲ್ಲಿ ಮಳೆಯು ಜೋರಾಗಿ ಸುರಿಯಿತು ಎಂಬ ಪ್ರತೀತಿ ಇದೆ.
ಮೂರು ದಶಕಗಳ ಹಿಂದೆ ದರ್ಗಾದ ಮುತುವಲ್ಲಿ ಬಾದಷಾ ಮುಲ್ಲಾ ಅಜ್ಜನವರು ಮತ್ತು ಶಾಂತವೀರ ಸ್ವಾಮೀಜಿ ನೇತೃತ್ವದಲ್ಲಿ ಭಕ್ತಸ್ತೋಮದೊಂದಿಗೆ ಶಿವಪ್ಪಯ್ಯಜ್ಜ ಗದ್ದುಗೆಗೆ ನಂದಿಕೇಶ್ವರ ಗ್ರಾಮದ ಭಕ್ತರು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದಾರೆ. ಶಿವಪ್ಪಯ್ಯಜ್ಜ ಗದ್ದುಗೆಗೆ ವೀರಶೈವ ಪದ್ಧತಿಯಂತೆ ಪೂಜಾ ಕೈಂಕರ್ಯಗಳು ಸೂಫಿ ಪರಂಪರೆ ಪದ್ಧತಿಯಂತೆ ಹಜರತ್ ಸೈಯದ್ ಬಾದಷಾ (ರ.ಹ) ಗದ್ದುಗೆಗೆ ಝಿಯಾರತ್ ನೆರವೇರಿಸಲಾಗುವುದು.
ದರ್ಗಾದ ಉರುಸ್ ಉಸ್ತುವಾರಿಯನ್ನು ನಾಲ್ಕು ತಲೆಮಾರಿನಿಂದ ಇಲ್ಲಿನ ಮುಲ್ಲಾ ಮನೆತನದವರು ಮಾಡುತ್ತ ಬಂದಿದ್ದಾರೆ. ಮುತುವಲ್ಲಿ ಅಬ್ದುಲ್ ಖಾದರಸಾಹೇಬ್ ಪೀರಾ, ಅಲ್ಲಾಭಕ್ಷ ಸಾಹೇಬ್, ಬಾಷಾಸಾಹೇಬ್ ಮುಲ್ಲಾ ಮತ್ತು ಪ್ರಸ್ತುತ ಹಜರತ್ ಮುಬಾರಕ ಬಾದಷಾ ಪೀಠಾಧಿಪತಿಯಾಗಿದ್ದಾರೆ.
ಆ.28ರಂದು ಗಂಧ, 29ರಂದು ಉರುಸ್ ನಡೆಯಲಿದೆ. ನಾಡಿನ ವಿವಿಧ ಮಠಾಧೀಶರು ಮತ್ತು ದರ್ಗಾದ ಮುತುವಲ್ಲಿಗಳು ಬರುವರು. ‘ ಶರಣರ ನಡಿಗೆ ಭಾವೈಕ್ಯದ ಕಡೆಗೆ ’ ಮೆರವಣಿಗೆ ನಡೆಯಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.