ಇಳಕಲ್: ಶಿಕ್ಷಕರ ಪ್ರಯತ್ನ ಹಾಗೂ ಸಮುದಾಯದ ಸಹಕಾರದಿಂದ ಇಳಕಲ್ ತಾಲ್ಲೂಕಿನ ಹಿರೇಶಿವನಗುತ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸುಣ್ಣ ಬಣ್ಣ ಪಡೆದು ಕಂಗೊಳಿಸುತ್ತಿದ್ದು, ವಿದ್ಯಾರ್ಥಿಗಳನ್ನು ಶಾಲೆಯತ್ತ ಆಕರ್ಷಿಸುತ್ತಿದೆ.
ಈ ಪ್ರಾಥಮಿಕ ಶಾಲೆ 1885ರಲ್ಲಿ ಆರಂಭಗೊಂಡು 135 ವಸಂತಗಳ ಪೂರೈಸಿದೆ. ಗುಡ್ಡದ ಬದಿ ಇಕ್ಕಟ್ಟಾದಜಾಗದಲ್ಲಿರುವಶಾಲೆಯು ಜೀರ್ಣಗೊಂಡು, ಬಣ್ಣಗೆಟ್ಟಿತ್ತು. ಶತಮಾನ ಪೂರೈಸಿದ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಶಿಕ್ಷಕರೆಲ್ಲರೂ ಕಾರ್ಯತತ್ಪರರಾದರು. ತಲಾ ₹3 ಸಾವಿರ ಸೇರಿಸಿ, ಅತ್ಯಗತ್ಯ ರಿಪೇರಿ ಮಾಡಿಸಿದರು. ಬಣ್ಣ ಹಚ್ಚಿಸಿದರು.
ಶಾಲೆಯ ಬಗ್ಗೆ ಶಿಕ್ಷಕರು ಹೊಂದಿರುವ ಕಾಳಜಿ ಗಮನಿಸಿದ ಶಾಲೆಯ ಹಳೆವಿದ್ಯಾರ್ಥಿ ವಿಜಯಪುರದಲ್ಲಿ ನೆಲೆಸಿರುವ ಗುತ್ತಿಗೆದಾರ ರಮೇಶ ಕುಲಕರ್ಣಿ ಅವರು ಸ್ವಯಂಪ್ರೇರಿತರಾಗಿ ₹35 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿ, ಗೋಡೆಯ ಮೇಲೆ ಪರಿಸರ ಸಂಬಂಧಿತ ಚಿತ್ರಗಳನ್ನು ಬಿಡಿಸಲು ನೆರವಾದರು. ಗೋಡೆಗಳ ಮೇಲೆ ಕಲಾವಿದನ ಕುಂಚದಿಂದ ಅರಳಿದಹಸಿರು ಹಾಗೂ ಹೂಗಳು ಎಲ್ಲರ ಗಮನ ಸೆಳೆಯುತ್ತಿವೆ.
ಇದೇ ಗ್ರಾಮದ ಮುಖಂಡ ಅಮರೇ ಗೌಡ (ಮುತ್ತಣ್ಣ) ಪಾಟೀಲ ಮೂಲಿಮನಿ ಅವರು ಶಿಕ್ಷಕರ ಉತ್ಸಾಹ ಕಂಡು ಶಾಲೆಗೆ ಅಗತ್ಯವಿದ್ದ ಮೂಲಸೌಕರ್ಯ ಒದಗಿಸಲುಮುಂದಾದರು. ಗ್ರಾಮ ಪಂಚಾಯ್ತಿಉದ್ಯೋಗ ಖಾತ್ರಿ ಯೋಜನೆಯ ಮೂಲಕ ಶಾಲಾ ಆವರಣ ಸಮತಟ್ಟುಗೊಳಿಸಿ, 80 ಸಸಿಗಳ ನೆಡಿಸಿದರು. ಬೋರ್ ವೆಲ್‍ಗೆ 5ಎಚ್‍ಪಿ ಮೋಟಾರ್ ವ್ಯವಸ್ಥೆ ಮಾಡಿ ಕುಡಿಯುವ ನೀರಿನಟ್ಯಾಂಕ್ ಕಟ್ಟಿಸಿಕೊಟ್ಟರು. ಜೊತೆಗೆ ಶಾಲಾ ಕೊಠಡಿಗಳ ಒಳಭಾಗದಲ್ಲಿ ಕಲಿಕೆಗೆ ಪೂರಕವಾದ ಚಿತ್ರ ಹಾಗೂ ಬರಹಗಳನ್ನು ಮಾಡಲು ₹50 ಸಾವಿರ ದೇಣಿಗೆ ನೀಡಿದ್ದಾರೆ. ಈಗ ವೇದಿಕೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮುಖ್ಯಶಿಕ್ಷಕ ಡಿ.ಎಂ.ತಳವಾರ ಹಾಗೂ ಇತರ ಸಹಶಿಕ್ಷಕರು ತಮ್ಮ ಕೆಲಸದ ಮೂಲಕ ಶಾಲೆಯ ಹಿರಿತನಕ್ಕೆ ಘನತೆ ತಂದಿದ್ದಾರೆ. ಶಿಕ್ಷಕರ ಕೆಲಸವು ಗ್ರಾಮಸ್ಥರ ಮೆಚ್ಚುಗೆ ಗಳಿಸಿದೆ. ಇದೆಲ್ಲದರಿಂದ ಸ್ಪೂರ್ತಿಗೊಂಡ ಯುವಕರು, ಹಳೇ ವಿದ್ಯಾರ್ಥಿಗಳು, ಶಾಲೆಗೆ ನಾವೇನು ಮಾಡಬೇಕು ಹೇಳಿ, ನಮಗೂ ಅವಕಾಶ ನೀಡಿ' ಎಂದು ಮುಂದೆ ಬಂದಿದ್ದಾರೆ.
ಎಲ್ಲದಕ್ಕಿಂತ ಹೆಚ್ಚಾಗಿ ಪಾಲಕರಿಗೆ ನಮ್ಮ (ಸರ್ಕಾರಿ) ಶಾಲೆಯ ಬಗ್ಗೆ ವಿಶ್ವಾಸ ವೃದ್ಧಿಯಾಗಿದೆ' ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದಪ್ಪ ಎಸ್. ಗೋನಾಳ ಅಭಿಮಾನದಿಂದ ಹೇಳುತ್ತಾರೆ.ಸದ್ಯ 305 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಗ್ರಾಮದ ಅನೇಕರು ಖಾಸಗಿ ಶಾಲೆಗಳ ಹಾಗೂ ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಹೊರ
ಬರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.