ತೇರದಾಳ: ಇಲ್ಲಿಯ ಉಪನೋಂದಣಿ ಕಚೇರಿ ಎದುರು ಇರುವ ರಾಜ್ಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ, ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ಬುಧವಾರ ಮಧ್ಯಾಹ್ನ ಜನ ಅಗ್ನಿಶಾಮಕ ದಳದ ವಾಹನಕ್ಕೂ ದಾರಿ ಬಿಡದೇ ಉದ್ಧಟತನ ತೋರಿದ ಘಟನೆ ಜರುಗಿದೆ.
ಬುಧವಾರ ಪಟ್ಟಣದ ಉಮೇಶ ಬಸಪ್ಪ ಪಾಟೀಲ್ ಎಂಬ ರೈತರ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದ್ದರಿಂದ ಅದನ್ನು ನಂದಿಸಲು ಬನಹಟ್ಟಿಯ ಅಗ್ನಿಶಾಮಕ ದಳದ ವಾಹನ ಜೋರಾಗಿ ಬಂದಿತಾದರೂ, ಉಪನೋಂದಣಿ ಕಚೇರಿಯ ಎದುರು ಹತ್ತು ನಿಮಿಷಗಳ ಕಾಲ ಸಂಚಾರ ದಟ್ಟಣೆಯಿಂದಾಗಿ ನಿಲ್ಲಬೇಕಾಯಿತು. ಆನಂತರ ಅಲ್ಲಿ ಹೋಗಿ ನೋಡಿದರೆ ವಾಹನ ನಿಲ್ಲಿಸಲು ಜಾಗದ ಕೊರತೆ. ‘ತಡವಾಗಿದ್ದರಿಂದ 5 ಎಕರೆ ಕಬ್ಬು ಸುಟ್ಟು ಹೋಯಿತು’ ಎಂದು ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ರಮೇಶ ಚಿವಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪಟ್ಟಣದ ನಾಡಕಚೇರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಪನೋಂದಣಿ ಕಚೇರಿಯನ್ನು ಬಸ್ ನಿಲ್ದಾಣದ ಬಳಿಯ ಹಳೆಯ ಪುರಸಭೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಕಚೇರಿ ಬಳಿ ಕೆಲವು ವಾಹನಗಳಿಗೆ ಪಾರ್ಕಿಂಗ್ ಮಾಡುವಷ್ಟು ಜಾಗ ಕೂಡ ಇದೆ. ಆದರೆ ಕೆಲವರು ತಮ್ಮ ದ್ವಿಚಕ್ರವಾಹನವನ್ನು ಕಚೇರಿ ಎದುರು ಇರುವ ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿಯ ಬಳಿ ನಿಲ್ಲಿಸುವುದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ಆದರೆ ಉಪನೋಂದಣಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದರಿಂದ ಸಮಸ್ಯೆ ಜಟಿಲವಾಗಿದೆ.
‘ಚಾ ಕುಡ್ಯಾಕ, ಜೆರಾಕ್ಸ್ ಮಾಡಸಾಕ ಬರೊ ಮಂದಿ ರೋಡ್ ಬಾಜು ಹೆಂಗ್ ಬೇಕ್ ಹಂಗ್ ಗಾಡಿ ನಿಲ್ಲಸ್ತಾರ. ಮುಂದೆ-ಹಿಂದಾ ಬರು ಗಾಡಿಗಳಿಗೂ ದಾರಿ ಬಿಡುವುದಿಲ್ಲ. ಸಾಲಿ ಗಾಡಿಗೋಳ, ಮಕ್ಕಳು, ಹೆಂಗಸರಿಗೆ ಮತ್ತ ವಯಸ್ಸಾದವರಿಗೆ ಇಲ್ಲಿಂದ ಮುಂದೆ ಹೋಗಾಕ ಬಾಳ ತ್ರಾಸ ಆಕೈತಿ. ಇಲ್ಲೊಬ್ರು ಪೊಲೀಸ್ ನಿಂತು ಸಂಭಾಳಿಸಿ ಆಗೋ ತೊಂದ್ರೆ ತಪ್ಪಿಸ್‌ಬೇಕು’ ಎನ್ನುತ್ತಾರೆ ಪಟ್ಟಣ ನಿವಾಸಿ ಪರಪ್ಪ ನಾಗನೂರ.
ಕಚೇರಿ ಅವಧಿಯಲ್ಲಿ ನಿತ್ಯ ಬೆಳಿಗ್ಗೆ 9ರ ನಂತರ ಬೈಕ್‌ಗಳು ನಿಲ್ಲಲು ಆರಂಭವಾಗುತ್ತವೆ. ಸಂಜೆಯವರೆಗೂ ಎಲ್ಲ ವಾಹನಗಳಿಗೂ ಇದು ಸಂಚಾರ ದಟ್ಟಣೆಯ ಬಿಸಿ ಮುಟ್ಟಿಸುತ್ತದೆ. ಕುಡಚಿ ಕಡೆಗೆ ಹೋಗಲು ಬಸ್ ನಿಲ್ದಾಣದಿಂದ ಹೊರಬರುವ ಸಾರಿಗೆ ಬಸ್‌ಗಳಿಗೆ ಅಡ್ಡಾದಿಡ್ಡಿಯಾಗಿ ನಿಲ್ಲುವ ಅಟೊಗಳು ಕಿರಿಕಿರಿಯನ್ನುಂಟು ಮಾಡಿದರೆ, ಈ ಸಂಚಾರ ದಟ್ಟಣೆ ಕೂಡ ತಡೆ ಹಾಕುತ್ತದೆ. ಬಸ್ ನಿಲ್ದಾಣದಿಂದ ರಬಕವಿ ರಸ್ತೆಯ ಪೊಲೀಸ್ ಠಾಣೆಯವರೆಗೆ, ಈತ್ತ ಪಿಕೆಪಿಎಸ್ ಬ್ಯಾಂಕ್‌ನಿಂದ ಕೆರೆಯವರೆಗೆ ದ್ವಿಪಥ ರಸ್ತೆಗಳಿದ್ದು ಬಸ್ ನಿಲ್ದಾಣದಿಂದ ಪಿಕೆಪಿಎಸ್ ಬ್ಯಾಂಕ್‌ವರೆಗೆ ಕಿರಿದಾದ ಹೆದ್ದಾರಿ ಇರುವುದು ಕೂಡ ಸಂಚಾರ ದಟ್ಟಣೆಗೆ ಮತ್ತೊಂದು ಕಾರಣವಾಗಿದೆ. ವಿಸ್ತರಣೆಗೆ ಅವಕಾಶವಿಲ್ಲವಾದರೆ ಪಾರ್ಕಿಂಗ್ ಸ್ಥಳವನ್ನು ಮಾಡಿಕೊಡಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Cut-off box - ಶೀಘ್ರ ಕ್ರಮ ಇಲ್ಲಿಯ ಸಂಚಾರ ದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ದಾರಿ ಕಿರಿದಾಗಿದ್ದರಿಂದ ತೊಂದರೆಯಾಗುತ್ತಿದೆ. ಅಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಲ್ಲಿಸುವ ಮೂಲಕ ಬೈಕ್ ನಿಲ್ಲಿಸದಂತೆ ಸಂಚಾರ ದಟ್ಟಣೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ತೇರದಾಳ ಪೊಲೀಸ್ ಠಾಣಾಧಿಕಾರಿ ಅಪ್ಪಣ್ಣ ಐಗಳಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.