ಮುಧೋಳ: ನಗರದ ವಿದ್ಯುತ್ ಸರಬರಾಜು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಕಟ್ಟಡದಲ್ಲಿ ಮಳೆ ನೀರು ಸೋರಿಕೆ ಆಗುತ್ತಿದ್ದು, ಎರಡು ವರ್ಷಗಳಿಂದ ಕಟ್ಟಡಕ್ಕೆ ತಾಡಪತ್ರಿ ಹೊದೆಸಿ ರಕ್ಷಣೆ ನೀಡಲಾಗುತ್ತಿದೆ. ನೂತನ ಕಟ್ಟಡ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವ ಪರಿಣಾಮ ಸಿಬ್ಬಂದಿ ಆತಂಕದಲ್ಲಿ ಕೆಲಸ ಮಾಡುವಂತಾಗಿದೆ.
ಸೋರಿದಾಗ ಕೊಠಡಿಯೊಳಗೆ ಮಳೆನೀರು ಹರಿದು ಬರುವುದನ್ನು ತಡೆಗಟ್ಟಲು ಕಟ್ಟಡದ ಚಾವಣಿ ಮೇಲೆ ತಾಡಪತ್ರಿ ಹೊದೆಸಲಾಗಿದೆ. ನಗರದ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಕಟ್ಟಡವನ್ನು ನೋಡುವ ದಾರಿಹೋಕರು ವಾಹನ ಸವಾರರು ಸರ್ಕಾರಿ ಕಚೇರಿಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಅಪಹಾಸ್ಯದ ಮಾಡುವಂತಾಗಿದೆ.
ಕಡತ ಕಾಪಾಡಲು ಹರಸಾಹಸ: ಕಚೇರಿಗೆ ಸಂಬಂಧಿಸಿದ ಕಡತ ಸಂಗ್ರಹಿಸಿರುವ ಕಟ್ಟಡವೇ ಸೋರುತ್ತಿರುವುದರಿಂದ ಕಡತಗಳನ್ನು ಕಾಪಾಡಿಕೊಳ್ಳುವುದೇ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಧಾರಾಕಾರ ಮಳೆ ಸುರಿದರೆ ಕಟ್ಟಡದ ಒಂದು ಕೊಠಡಿ ಸೋರುತ್ತದೆ. ಈ ಕೊಠಡಿಯಲ್ಲಿನ ಕಂಪ್ಯೂಟರ್‌ಗಳನ್ನು ಸ್ಥಳಾಂತರಿಸಲು ಜಾಗದ ಕೊರತೆಯಿರುವ ಕಾರಣ ಸೋರುವ ಸೂರಿನಡಿಯಲ್ಲಿಯೇ ಕಾರ್ಯನಿರ್ವಹಿಸುವುದು ಸಿಬ್ಬಂದಿಗೆ ಅನಿವಾರ್ಯವಾಗಿದೆ.
ಆಮೆಗತಿಯಲ್ಲಿ ಸಾಗಿದ ಕಾಮಗಾರಿ: ವಿದ್ಯುತ್ ಸರಬರಾಜು ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣ ಕಾರ್ಯ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಆಮೆಗತಿಯ ಕಾಮಗಾರಿಯಿಂದಾಗಿ ನೂತನ ಕಟ್ಟಡ ಪೂರ್ಣಗೊಳ್ಳಲು ತಿಂಗಳುಗಳೇ ಬೇಕಾಗಬಹುದು. ನೂತನ ಕಟ್ಟಡ ಕಾಮಗಾರಿ ಬಗ್ಗೆ ತಲೆ ಕೆಡಿಸಿಕೊಳ್ಳದ ಮೇಲಧಿಕಾರಿಗಳು ಕೆಳಹಂತದ ಸಿಬ್ಬಂದಿ ನೋವಿಗೆ ಸ್ಪಂದಿಸುತ್ತಿಲ್ಲ ಎಂಬ ಮಾತುಗಳು ಕಚೇರಿ ಅಂಗಳದಲ್ಲಿ ಕೇಳಿಬರುತ್ತಿವೆ.
ಕಚೇರಿ ಕೆಲಸಗಳಿಗೆ ಹಿನ್ನಡೆ: ಕಳೆದೊಂದು ವಾರದಿಂದ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಸ್ಕಾಂ ಕಚೇರಿ ಸೋರುತ್ತಿದೆ. ಇದರಿಂದಾಗಿ ಕಚೇರಿ ಕೆಲಸಕ್ಕಾಗಿ ವಿವಿಧ ಭಾಗಗಳಿಂದ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ.
ಉಪವಿಭಾಗದ ಕಟ್ಟಡದಲ್ಲಿ ವಿಭಾಗೀಯ ಕಚೇರಿ ನಡೆಯುತ್ತಿದೆ. ವಿಭಾಗೀಯ ಕಚೇರಿ ಕಟ್ಟಡ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು ಒಂದೆರಡು ತಿಂಗಳಲ್ಲಿ ಸ್ಥಳಾಂತರಗೊಳ್ಳಲಿದೆ.– ವೀರಣ್ಣ ಮರಿಕಟ್ಟಿ ಎಇಇ ಹೆಸ್ಕಾಂ ಮುಧೋಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.