ಇಳಕಲ್: ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಶ್ರಾವಣದ ಕೊನೆಯ ಸೋಮವಾರ ಸೆ. 2 ರಂದು ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಆವರಣದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ, ವಚನ ಗ್ರಂಥಗಳ ರಥೋತ್ಸವ ಹಾಗೂ ಸೆ. 3ರಂದು ವಚನಗಳ ತಾಡೋಲೆ ಕಟ್ಟಿನ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ.
ವಿಜಯ ಮಹಾಂತೇಶ್ವರ ಮಠವು ಯಡೆಯೂರು ಸಿದ್ದಲಿಂಗೇಶ್ವರ ಶಿವಯೋಗಿಗಳ ಪ್ರೇರಣೆಯಿಂದ 1462 ರಲ್ಲಿ ಚಿತ್ತರಗಿಯಲ್ಲಿ ಸ್ಥಾಪನೆಯಾಗಿತು. ಅಂದಿನಿಂದ ಈ ಪೀಠದ ಪರಂಪರೆಯಲ್ಲಿ ಬಂದ 19 ಸ್ವಾಮೀಜಿಗಳೆಲ್ಲರೂ ‘ಗುರು ಮಹಾಂತ’, ‘ವಿಜಯ ಮಹಾಂತ’ ಹಾಗೂ ‘ಮಹಾಂತ’ ನಾಮಾಂಕಿತರಾಗಿದ್ದಾರೆ. ಈ ನಿರಂಜನ ಪೀಠದ 16 ನೇ ಪೀಠಾಧಿಪತಿ ಆಗಿದ್ದವರು ಮಹಾತಪಸ್ವಿ, ಪರಮ ದಾಸೋಹಿ, ಚಿತ್ತರಗಿ ಚಿಜ್ಯೋತಿ ಎಂದೇ ಖ್ಯಾತರಾದ ವಿಜಯ ಮಹಾಂತ ಶಿವಯೋಗಿಗಳು. ಇವರು ಲಿಂಗೈಕ್ಯರಾಗಿ 110 ವರ್ಷಗಳಾಗಿದ್ದರೂ ಅವರ ಪ್ರಭಾವ ಭಕ್ತರ ಮನಸ್ಸಿನಲ್ಲಿ ಇವತ್ತಿಗೂ ಅಚ್ಚೊತ್ತಿದೆ.
ಬಸವತತ್ವದ ಪರಿಪಾಲಕರಾಗಿದ್ದ ವಿಜಯ ಮಹಾಂತರ ತಪಸ್ ಶಕ್ತಿ, ಕರ್ತೃತ್ವಶಕ್ತಿಯಿಂದಾಗಿ ಚಿತ್ತರಗಿ–ಇಳಕಲ್ ಪೀಠ ನಾಡಿನಲ್ಲಿ ಖ್ಯಾತಿ ಗಳಿಸಿದೆ. ವಿಜಯ ಮಹಾಂತ ಶಿವಯೋಗಿಗಳು ಹಾಸನ ಜಿಲ್ಲೆಯ ಸಸಿವಾಳದಲ್ಲಿ ಕ್ರಿ.ಶ 1850ರಲ್ಲಿ ಕೊಳಗಲ್ಲಮಠದ ವೀರಯ್ಯ ಹಾಗೂ ಗೌರಮ್ಮ ದಂಪತಿಯ ಮಗನಾಗಿ ಜನಿಸಿದರು. ಮಳೆಯಪ್ಪಯ್ಯ ಅವರ ಬಾಲ್ಯದ ಹೆಸರು. ತಂದೆ-ತಾಯಿಯ ವಿರೋಧದ ನಡುವೆ ಶಿವಪಥದ ಹುಡುಕಾಟಕ್ಕಾಗಿ ಸಸಿವಾಳದ ಸಮೀಪದಲ್ಲಿದ್ದ ಕಲ್ಬೆಟ್ಟದ ಆಶ್ರಮವಾಸಿಯಾದರು. ಬಳ್ಳಾರಿಯ ಸಕ್ಕರೆ ಕರಡೆಪ್ಪನವರ ಸಂಸ್ಕೃತ ಪಾಠಶಾಲೆಯಲ್ಲಿ ಓದಿದರು. ಓದುವುದು ಪಂಡಿತನಾಗುವುದಕ್ಕಲ್ಲ, ಅಧ್ಯಾತ್ಮದ ಅರಿವು ವಿಸ್ತರಿಸಿಕೊಳ್ಳುವುದಕ್ಕೆ ಎಂಬುದು ಅವರ ನಿಲುವಾಗಿತ್ತು.
ಚಿತ್ತರಗಿ ಪೀಠದ ಪರಮ ಭಕ್ತರಾದ ಅಮರಾವತಿಯ ಶ್ರೀಮಂತ ರಾಮಪ್ಪ ದೇಸಾಯಿ ಅವರು ಸಕ್ರಿ ಕರೆಡಪ್ಪನವರ ಪಾಠಶಾಲೆಯಲ್ಲಿದ್ದ ಮಳೆಯಪ್ಪಯ್ಯನವರನ್ನು ‘ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಪೀಠಾಧೀಶರಾಗಲು ವಿನಂತಿಸಿದರು. ಕ್ರಿ.ಶ 1879 ರಲ್ಲಿ ಮಳೆಯಪ್ಪಯ್ಯನವರು ವಿಜಯ ಮಹಾಂತ ಶಿವಯೋಗಿ ನಾಮಾಂಕಿತರಾಗಿ ಚಿತ್ತರಗಿ ಪೀಠದ ಪೀಠಾಧಿಪತಿ ಆದರು. ಆರಂಭದ 12 ವರ್ಷ ವಚನ ಸಾಹಿತ್ಯವನ್ನು ಅಭ್ಯಾಸ ಮಾಡಿ, ನಾಡಿನುದ್ದಕ್ಕೂ ಯಾತ್ರೆ ಕೈಗೊಂಡರು. ಬೆನ್ನಿಗೆ ವಚನಗಳ ಕಟ್ಟು, ಬಿಳಿ ಕಪನಿ, ಕಾವಿ ಪೇಟ, ಕಾಲಿಗೆ ಚರ್ಮದ ಜೋಡು ತೊಟ್ಟು, ಪ್ರೀತಿಯ ಆಕಳು ‘ಮಹಾಂತಮ್ಮ’ಳೊಂದಿಗೆ ಕುದುರೆ ಸವಾರರಾಗಿ ನಾಡು ಸುತ್ತಿದರು. ಬಸವಣ್ಣನವರನ್ನು ‘ಕಲ್ಯಾಣದಪ್ಪ’ ಎನ್ನುತ್ತಿದ್ದ ಅವರು, ವಚನಗಳನ್ನು ಪ್ರಸಾರ ಮಾಡಿದರು. ಶಿವಯೋಗಿಗಳ ಇಚ್ಛಾಬಲ ಹಾಗೂ ಮಾತಿನ ಪರಿಣಾಮಗಳಲ್ಲಿ ಭಕ್ತರು ಪವಾಡಗಳನ್ನು ಕಂಡರು.
ಪರಿಶುದ್ಧವಿದ್ದರೇ ಮಾತ್ರ ಕಾವಿಗೆ ಮಹತ್ವ
‘ನೀವೇಕೆ ಕಾವಿ ಕಪನಿ (ನಿಲುವಂಗಿ) ಧರಿಸುವುದಿಲ್ಲ?’ ಎಂಬ ಭಕ್ತರ ಪ್ರಶ್ನೆಗೆ ‘ಧರಿಸಿರುವ ಕಾವಿ ಪೇಟವೊಂದರ ಪಾವಿತ್ರ್ಯ ಉಳಿಸಿಕೊಳ್ಳುವುದೇ ಕಠಿಣವಾಗಿದೆ. ಇಡೀ ದೇಹಕ್ಕೆ ಕಾವಿ ಕಪನಿ ತೊಟ್ಟರೆ ಅದರ ನಿರ್ಮಲತೆ ಕಾಪಾಡಲು ಇನ್ನೆಂತಹ ವ್ರತ ಕೈಗೊಳ್ಳಲಿ? ಪರಿಶುದ್ಧವಿದ್ದರೇ ಮಾತ್ರ ಕಾವಿಗೆ ಮಹತ್ವ. ಇಲ್ಲದಿದ್ದರೇ ಅದು ಇನ್ನೊಂದು ವಸ್ತ್ರ ಹಾಗೂ ಬಣ್ಣವಷ್ಟೇ ಆದೀತು’ ಎಂದು ಕಾವಿಯ ಮಹತ್ವ ಹಾಗೂ ಜವಾಬ್ದಾರಿ ಬಗ್ಗೆ ತಿಳಿ ಹೇಳುತ್ತಿದ್ದರು. ಅವರನ್ನು ತಮ್ಮ ಸಮಾಧಿ ಅಥವಾ ಗದ್ದುಗೆ ಎಲ್ಲಿರಬೇಕು ? ಹೇಗಿರಬೇಕು ? ಎಂದು ಭಕ್ತರು ಕೇಳಿದಾಗ ‘ಕಲ್ಯಾಣದಪ್ಪ ಹೇಳ್ಯಾನ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು. ‘ಗದ್ದುಗೆ ಕಟ್ಟಬೇಡಿ ಹೊಲದಲ್ಲಿ ತಗ್ಗು ತೋಡಿ ಮುಚ್ಚಿ ಮೇಲೆ ಉಳುಮೆ ಮಾಡಿ ಉತ್ತಮ ಫಸಲು ಬಂದೀತು’ ಎಂದಿದ್ದರು. ಶಿವಯೋಗಿಗಳು ತಮ್ಮ 61ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಭಕ್ತರು ಶಿವಯೋಗಿಗಳ ಮಾತು ಮೀರಿ ಗದ್ದುಗೆ ನಿರ್ಮಿಸಿದರು. ಇವತ್ತು ಕರ್ತೃ ಗದ್ದುಗೆ ಲಕ್ಷಾಂತರ ಜನರ ಶ್ರದ್ಧೆಯ ಕೇಂದ್ರವಾಗಿದ್ದು ಭಕ್ತಿಯಿಂದ ನಮಿಸಿ ನೆಮ್ಮದಿ ಸ್ಫೂರ್ತಿ ಪಡೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.