ಮಹಾಲಿಂಗಪುರ: ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯ ಮೊದಲಿದ್ದ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ದಲಾಲ ವರ್ತಕರ ಸಂಘದಿಂದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಮಾತನಾಡಿ, ಎಪಿಎಂಸಿ ಕಾಯ್ದೆ ಬದಲಾವಣೆ ಮಾಡಿದ್ದರಿಂದ ರೈತರಿಗೆ ಸರಿಯಾದ ತೂಕ, ದರ, ಮಾರುಕಟ್ಟೆ ದರದ ಏರಳಿತ ಸರಿಯಾಗಿ ಸಿಗುತ್ತಿಲ್ಲ. ಮಾರುಕಟ್ಟೆ ಹೊರಗೆ ಮಾರಾಟ ಮಾಡುವುದರಿಂದ ಸ್ಪರ್ಧೆ ಏರ್ಪಡುವುದಿಲ್ಲ. ರೈತನ ಹತ್ತಿರ ಒಬ್ಬ ಖರೀದಿದಾರರು ಹೋದಾಗ ಸ್ಪರ್ಧಾತ್ಮಕವಾಗುವುದಿಲ್ಲ. ಬೇರೆ ಗುಣಮಟ್ಟದ ಹುಟ್ಟುವಳಿಗೆ ಸರಿಯಾದ ಖರೀದಿದಾರರು ಸಿಗುವುದಿಲ್ಲ ಎಂದರು.
ಎಪಿಎಂಸಿಗೆ ಬರುವ ಆದಾಯ ನಿಂತು ಹೋಗಿದೆ. ಎಪಿಎಂಸಿ ಸಿಬ್ಬಂದಿಗೂ ಸರಿಯಾಗಿ ವೇತನ ಸಿಗುತ್ತಿಲ್ಲ. ಸುಧಾರಣೆ ಸಹಿತ ನಿಂತು ಹೋಗಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಎಪಿಎಂಸಿಗಳಲ್ಲಿರುವ ಎಲ್ಲ ಪೇಟೆಯ ಕಾರ್ಯಕರ್ತರಿಗೆ ಕೆಲಸವೇ ಇಲ್ಲದಂತಾಗಿದೆ. ಎಲ್ಲ ಹುಟ್ಟುವಳಿ ಅನಧಿಕೃತವಾಗಿ ಮಾರಾಟ ಹೊರಗೆ ಆಗುತ್ತದೆ. ಇದರಿಂದ ಎಪಿಎಂಸಿಯ ಎಲ್ಲ ಕಾರ್ಯಕರ್ತರು, ಹಮಾಲರು ಬೀದಿಗೆ ಬಿದ್ದಂತಾಗಿದೆ. ಹೀಗಾಗಿ, ಎಪಿಎಂಸಿಯ ಮೊದಲಿದ್ದ ಕಾಯ್ದೆಯನ್ನು ಮರು ಜಾರಿ ಮಾಡಬೇಕು ಎಂದರು.
ಅಶೋಕ ಅಂಗಡಿ, ಶ್ರೀಶೈಲ ನುಚ್ಚಿ, ಕಲ್ಲಪ್ಪ ತೇಲಿ, ಸಂಗಪ್ಪ ಲೋನಿ, ವಿನಯ ಚಮಕೇರಿ, ಸುನೀಲ ಕಿರಗಟಗಿ, ವಿಜಯಕುಮಾರ ಬಾಡನವರ, ಬಸವರಾಜ ಬಟಕುರ್ಕಿ, ಬಸವರಾಜ ನಿಂಬರಗಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.