ADVERTISEMENT

ಬೀಳಗಿ: ಸಂಕಷ್ಟದಲ್ಲೇ ಸಾಗಿದೆ ಅಲೆಮಾರಿಗಳ ಬದುಕು

ಕಡಿಮೆ ದರದಲ್ಲಿ ಆಕರ್ಷಕ ವಸ್ತು ಸಿದ್ಧಗೊಳಿಸಿ ಮಾರುವ ಕಲಾವಿದರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 7:38 IST
Last Updated 1 ನವೆಂಬರ್ 2024, 7:38 IST
ಬೀಳಗಿಯ ಕೆಇಬಿ ಕಚೇರಿಯ ಬಳಿ ರಸ್ತೆ ಬದಿಯಲ್ಲಿ ಅಲೆಮಾರಿ ಸಮುದಾಯದವರು ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕಾಗಿ ಪ್ರದರ್ಶಿಸಿರುವುದು
ಬೀಳಗಿಯ ಕೆಇಬಿ ಕಚೇರಿಯ ಬಳಿ ರಸ್ತೆ ಬದಿಯಲ್ಲಿ ಅಲೆಮಾರಿ ಸಮುದಾಯದವರು ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕಾಗಿ ಪ್ರದರ್ಶಿಸಿರುವುದು   

ಬೀಳಗಿ: ‘ಊರೂರು ಅಲೆಯುವ ನಮ್ಮಂತಹ ಅಲೆಮಾರಿಗಳಿಗೆ ಸ್ವಂತ ಜಾಗ, ಮನೆ ಎಂಬುದು ಇರುವುದಿಲ್ಲ. ಆಶ್ರಯ ಸಿಕ್ಕ ಕಡೆ ಉಳಿಯುತ್ತೇವೆ. ಕೆಲ ದಿನಗಳ ಬಳಿಕ ಮತ್ತೆ ಮುಂದಿನ ಊರಿಗೆ ಪ್ರಯಾಣಿಸುತ್ತೇವೆ. ಆಯಾ ಸಮಯಕ್ಕೆ ಸಿಗುವ ವಸ್ತುಗಳನ್ನು ಮಾರುತ್ತ ಬದುಕುತ್ತೇವೆ’ ಎಂದು ತಮ್ಮ ದೈನಂದಿನ ಬದುಕನ್ನು ಸಂಕ್ಷಿಪ್ತವಾಗಿ ವಿವರಿಸಿದವರು ಇಂದ್ರಹಾಸನ.

ಅಲೆಮಾರಿ ಸಮುದಾಯದ ಅವರು ಕುಟುಂಬದ ಜೊತೆಗೆ ಮುಧೋಳ ಶಿವಾಜಿ ವೃತ್ತದ ಬಳಿ ತಾತ್ಕಾಲಿಕ ನೆಲೆ ಕಂಡುಕೊಂಡಿದ್ದಾರೆ. ಅಲ್ಲಿ ರಸ್ತೆ ಬದಿ ಅಲಂಕಾರಿಕ ವಸ್ತುಗಳನ್ನು ಮಾರುತ್ತಾರೆ. ಅವರೊಂದಿಗೆ 5ಕ್ಕೂ ಹೆಚ್ಚು ಕುಟುಂಬಗಳು ವಾಸವಿವೆ.

‘ಉತ್ತರಪ್ರದೇಶದ ವಾರಣಾಸಿಯ ಅಲೆಮಾರಿ ಸಮುದಾಯದವರು ದೀರ್ಘ ಕಾಲ ಒಂದೇ ಕಡೆ ಉಳಿಯುವುದಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುವುದರ ಜೊತೆಗೆ ಅಲಂಕಾರಿಕ ವಸ್ತುಗಳನ್ನು ಮಾರುತ್ತಾರೆ. ನಮ್ಮ ಪೂರ್ವಜರ ಕಾಲದಿಂದ ಸಣ್ಣಪುಟ್ಟ ಕೆಲಸಗಳನ್ನೇ ನಂಬಿದ್ದೇವೆ. ನಮ್ಮವರಲ್ಲಿ ಬಹುತೇಕ ಮಂದಿ ಅಕ್ಷರಸ್ಥರಲ್ಲ. ಕೆಲವರು ಕಾಲೇಜು ಹಂತದವರೆಗೆ ಓದಿದ್ದರೂ ಉದ್ಯೋಗ ಸಿಕ್ಕಿಲ್ಲ. ಆರ್ಥಿಕ ಸಂಕಷ್ಟದಲ್ಲೇ ಎಲ್ಲವನ್ನೂ ನಿಭಾಯಿಸಿ ಬದುಕು ನಡೆಸಿದ್ದೇವೆ. ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ನಂಬಿಕೆ ನಮ್ಮದು’ ಎಂದು ಇಂದ್ರಹಾಸನ ತಿಳಿಸಿದರು.

ADVERTISEMENT

‘ಹಬ್ಬದ ಸಂದರ್ಭದಲ್ಲಿ ನಾವೇ ಪ್ಲಾಸ್ಟಿಕ್ ಹಾರ, ಬಾಗಿಲು ತೋರಣ ಸೇರಿ ಬಗೆಬಗೆಯ ವಸ್ತುಗಳನ್ನು ಸಿದ್ಧಪಡಿಸುತ್ತೇವೆ. 10 ವರ್ಷಗಳಿಂದ ಇದೇ ಕಾಯಕ ನೆಚ್ಚಿಕೊಂಡಿದ್ದೇವೆ. ದೀಪಾವಳಿ ಈ ನಾಡಿಗೆ ದೊಡ್ಡ ಹಬ್ಬ, ನಾವು ಸಿದ್ಧಪಡಿಸಿದ ವಸ್ತುಗಳನ್ನು ಈ ಹಬ್ಬದಲ್ಲಿ ಹೆಚ್ಚು ಜನರು ಖರೀದಿಸುತ್ತಾರೆ. ಆಯಾ ದಿನದ ದುಡಿಮೆಯಿಂದ ನಮಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಪ್ಲಾಸ್ಟಿಕ್‌ ವಸ್ತುಗಳ ವ್ಯಾಪಾರಿ ತಿಳಿಸಿದರು.

‘ನಮ್ಮ ಬಳಿ ಸಾವಿರಕ್ಕೂ ಹೆಚ್ಚು ಬಗೆಬಗೆಯ ಹಾರಗಳಿವೆ. ಸಾಧಾರಣ ಸರಳ ಹಾರಗಳ ದರ ₹ 50 ರಿಂದ ₹ 200 ಇದ್ದರೆ, ವಿನ್ಯಾಸವುಳ್ಳ ಹಾರಗಳ ದರ ₹ 250 ರಿಂದ ಶುರುವಾಗುತ್ತದೆ. ಇವುಗಳು ಅಲ್ಲದೇ ಬೇರೆ ಬೇರೆ ಆಕರ್ಷಕ ವಸ್ತುಗಳು ಕಡಿಮೆ ದರದಲ್ಲಿ ಸಿಗುತ್ತವೆ’ ಎಂದರು.

ಆನ್‌ಲೈನ್‌ ಮಾರುಕಟ್ಟೆಯಿಂದ ನಮಗೆ ಬೇಡಿಕೆ ಕಡಿಮೆ
‘ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಹಿವಾಟು ಕೂಡ ಹೆಚ್ಚಾಗಿದ್ದು ಬಹುತೇಕ ಮಂದಿ ಮೊಬೈಲ್‌ನಲ್ಲೇ ಬಗೆಬಗೆಯ ವಸ್ತುಗಳನ್ನು ಆಯ್ಕೆ ಮಾಡಿ ಖರೀದಿಸುತ್ತಾರೆ. ಇದರಿಂದ ನಾವು ಮಾರುವ ವಸ್ತುಗಳಿಗೆ ಬೇಡಿಕೆ ಕೊಂಚ ಕುಗ್ಗಿದೆ. ಆದರೂ ನಾವು ಕುಲಕಸುಬು ಬಿಡಲು ಆಗುವುದಿಲ್ಲ. ನಮಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಸಿಗುವುದಿಲ್ಲ. ಜನರು ಆನ್‌ಲೈನ್‌ನಲ್ಲಿ ದುಬಾರಿ ಖರ್ಚು ಮಾಡಿ ವಸ್ತುಗಳನ್ನು ಕೊಳ್ಳುವ ಬದಲು ನಾವು ಸಿದ್ಧಪಡಿಸಿದ ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು. ಮಾರಾಟದಿಂದ ಬರುವ ಆದಾಯದಿಂದ ನಾವು ಖುಷಿಯಿಂದ ದೀಪಾವಳಿ ಆಚರಿಸಲು ಸಾಧ್ಯವಾಗುತ್ತದೆ’ ಇಂದ್ರಹಾಸನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.