ಕೂಡಲ ಸಂಗಮ: ಕೋವಿಡ್ ಎರಡನೆ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸರ್ಕಾರ ಸೂಚನೆ ನೀಡಿದೆ, ಆದರೆ ಇದು ಪ್ರವಾಸಿಗರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕೂಡಲಸಂಗಮಕ್ಕೆ ತಂಡೋಪ ತಂಡವಾಗಿ ಬಂದ ಪ್ರವಾಸಿಗರು ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆದರು.
ಡಿಸೆಂಬರ್ 24 ಸಾಂದರ್ಭಿಕ ರಜೆ, 25 ಕ್ರೀಸ್ ಮಸ್, 26 ನಾಲ್ಕನೇ ಶನಿವಾರ, 27 ಭಾನುವಾರ. ನಿರಂತರ ನಾಲ್ಕು ದಿನ ರಜೆ ಬಂದಿರುವುದು, ಕೆಲವು ಸರ್ಕಾರಿ ನೌಕರರು ವರ್ಷದ ಕೊನೆಯ ದಿನಗಳಲ್ಲಿ ಉಳಿಸಿದ ರಜೆಯನ್ನು ಪಡೆದು ಪ್ರವಾಸ ಕೈಗೊಂಡಿದ್ದರಿಂದ ಐತಿಹಾಸಿಕ ಪ್ರವಾಸಿ ತಾಣಗಳಾದ ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಶಿವಯೋಗ ಮಂದಿರ, ಬಾದಾಮಿ ಕಳೆದ ನಾಲ್ಕು ದಿನಗಳಿಂದ ಪ್ರವಾಸಿಗರಿಂದ ತುಂಬಿ ಹೋಗಿತ್ತು.
24 ರಿಂದ 26ರ ವರೆಗೆ ಮೂರು ದಿನದಲ್ಲಿ ಕೂಡಲಸಂಗಮಕ್ಕೆ 11,710 ಪ್ರವಾಸಿಗರು ಭೇಟಿ ನೀಡಿದ್ದಾರೆ. ಭಾನುವಾರ ಎರಡನೇ ಹಂತದ ಚುನಾವಣೆ ಇದ್ದರು ಬೆಳಗ್ಗೆಯಿಂದಲೇ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಕ್ಷೇತ್ರದ ದರ್ಶನಕ್ಕೆ ಬಂದಿದ್ದರು. ಮದುವೆ ಕಾರ್ಯಗಳು ಸಹ ನಡೆದಿದ್ದವು.
ದೇವಾಲಯ ಆವರಣದಲ್ಲಿ ಕೊವಿಡ್ ಮುಂಜಾಗ್ರತೆಯನ್ನುಮಂಡಳಿ ಕೈಗೊಳ್ಳದೆ ಇದ್ದ ಕಾರಣ ಭಕ್ತರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಸಂಗಮನಾಥ ಹಾಗೂ ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆದರು. ಸಂಗಮನಾಥ, ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆಯಲು ಕೋವಿಡ್ ನಿಯಮಗಳನ್ನು ಜಾರಿ ಮಾಡಿರಲಿಲ್ಲ. ಕಾಟಾಚಾರಕ್ಕೆ ಎನ್ನುವಂತೆ ಸ್ಯಾನಿಟೈಸರ್ ಹಾಕುತ್ತಿದ್ದರು. ಯಾರೂ ಮಾಸ್ಕ್ ಧರಿಸಿರಲಿಲ್ಲ. ಬಾದಾಮಿ, ಪಟ್ಟದಕಲ್ಲು, ಐಹೊಳೆಯ ಸ್ಮಾರಕ ವಿಕ್ಷಣೆಗೆ ಮಾಸ್ಕ್ ಕಡ್ಡಾಯ, ದೇಹದ ಉಷ್ಣತೆ ಪರೀಕ್ಷೆ ನಡೆಸಿದ ನಂತರವೇ ಪ್ರವೇಶ ನೀಡಲಾಯಿತು. ಸಂಬಂಧಿಸಿದ ಅಧಿಕಾರಿಗಳು ಕೋವಿಡ್ ನಿಯಮ ಜಾರಿ ಮಾಡಬೇಕು. ನಿಯಮ ಪಾಲಿಸುವಂತೆ ಭಕ್ತರಿಗೂ ತಾಕೀತು ಮಾಡಬೇಕು ಎಂದು ಬೆಳಗಾವಿಯ ಪ್ರವಾಸಿ ಚಿದಾನಂದ ಪತ್ತಾರ ಹೇಳಿದರು. ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಕೂಡಲಸಂಗಮಕ್ಕೆ ಬಂದಿದ್ದಾರೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ರಘು ಎ.ಇ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.