ADVERTISEMENT

ದೀಪಾವಳಿ ಹಬ್ಬಕ್ಕೆ ಬೆಳೆದ ಸೇವಂತಿಗೆ: ಲಕ್ಷಾಧೀಶನಾದ ರೈತ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 5:56 IST
Last Updated 30 ಅಕ್ಟೋಬರ್ 2024, 5:56 IST
<div class="paragraphs"><p><strong>ಬೀಳಗಿ ತಾಲ್ಲೂಕಿನ ತೊಳಮಟ್ಟಿ ಗ್ರಾಮದ ತಮ್ಮ ಹೊಲದಲ್ಲಿ ಬೆಳೆದ ಸೇವಂತಿ ಗಿಡಗಳೊಂದಿಗೆ ಕೃಷಿಕ ಸಿದ್ದಪ್ಪ ಜಮಖಂಡಿ</strong></p></div>

ಬೀಳಗಿ ತಾಲ್ಲೂಕಿನ ತೊಳಮಟ್ಟಿ ಗ್ರಾಮದ ತಮ್ಮ ಹೊಲದಲ್ಲಿ ಬೆಳೆದ ಸೇವಂತಿ ಗಿಡಗಳೊಂದಿಗೆ ಕೃಷಿಕ ಸಿದ್ದಪ್ಪ ಜಮಖಂಡಿ

   

ಬೀಳಗಿ: ತಾಲ್ಲೂಕಿನ ತೊಳಮಟ್ಟಿ ಗ್ರಾಮದ ಯಲ್ಲನಗೌಡ ಪಾಟೀಲ ಅವರ ಭೂಮಿಯನ್ನು ಲೀಜ್ ತೆಗೆದುಕೊಂಡ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಮಂಟೂರ ಗ್ರಾಮದ ರೈತ ಸಿದ್ದಪ್ಪ ಜಮಖಂಡಿ ಸೇವಂತಿಗೆ, ಚೆಂಡು ಹೂವು ಬೆಳೆದು ಲಾಭ ಗಳಿಸಿದ್ದಾರೆ.

ಸದ್ಯಕ್ಕೆ ಸೇವಂತಿಗೆ ದರ ಕೆಜಿಗೆ ₹200 ರಿಂದ ₹ 250 ಇದೆ. ಸಿದ್ದಪ್ಪ ಜಮಖಂಡಿ ಅವರು 30 ಗುಂಟೆಯಲ್ಲಿ ಸೇವಂತಿಗೆ ಬೆಳೆದಿದ್ದು, ಇದರಲ್ಲಿ ಕನಿಷ್ಠ 2 ಟನ್‌ ಫಲ ಬರಲಿದೆ.

ADVERTISEMENT

ಇದೇ ದರ ಒಂದು ತಿಂಗಳು ಮುಂದುವರಿದರೆ ₹3 ರಿಂದ ₹ 4 ಲಕ್ಷ ಆದಾಯ ಬರಲಿದೆ. ₹ 1 ಲಕ್ಷ ವೆಚ್ಚ ಮಾಡಿದ್ದು, ₹2 ಲಕ್ಷ ಲಾಭ ಗಳಿಸುವ ನಿರೀಕ್ಷೆಯಿದೆ. ಹೊಲದಲ್ಲಿ ಮನೆ ಕಟ್ಟಿಕೊಂಡ ಕಾರಣ ಅವರಿಗೆ ಕೃಷಿಯತ್ತ ಸಂಪೂರ್ಣ ಗಮನ ಹರಿಸಲು ಅನುಕೂಲವಾಗಿದೆ.

ಪತ್ನಿ ಸಿದ್ದವ್ವ ಹಾಗೂ ಪುತ್ರ ಜಗದೀಶ ಇವರಿಗೆ ಕೃಷಿಯಲ್ಲಿ ಸಾಥ್ ನೀಡುತ್ತಿದ್ದಾರೆ. ‘ನನಗೆ 2.5 ಎಕರೆ ಜಮೀನಿದೆ. 10 ಗುಂಟೆ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆದಿರುವೆ. ಬೀಳಗಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚೆಂಡೂ ಹೂವು, ಸೇವಂತಿಗೆ ಕೆಜಿಗೆ ₹250 ದರದಲ್ಲಿ ಮಾರಾಟವಾಗುತ್ತಿದೆ. ವರ್ತಕರು ನಮ್ಮ ಜಮೀನಿಗೆ ಬಂದು ₹200ಕ್ಕೆ ಖರೀದಿಸಿ ಅವರೇ ಸಾಗಣೆ ಮಾಡುತ್ತಾರೆ. ನಮಗೆ ನಿರ್ವಹಣೆ ಹಾಗೂ ಕೂಲಿಯ ವೆಚ್ಚ ಮಾತ್ರ ಬರುತ್ತದೆ. ದೀಪಾವಳಿ ಹಬ್ಬವಿರುವುದರಿಂದ ಹೆಚ್ಚಿನ ದರದಲ್ಲಿ ಮಾರಾಟವಾಗಬಹುದು ಎಂದು ಸಿದ್ದಪ್ಪ ಜಮಖಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವ ಸಮಯದಲ್ಲಿ ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದು ಗೊತ್ತಿರಬೇಕು. ವಾಣಿಜ್ಯ ಚಟುವಟಿಕೆ ಅನುಸಾರ ಲಾಭದಾಯಕ ಬೆಳೆ ಬೆಳೆಯಬಹುದು. ಸೌತೆಕಾಯಿ ಬೆಳೆ ಬಾಳೆಕಾಯಿ, ಸೇವಂತಿಗೆ ಹೂವು ಒಂದಾದ ಮೇಲೊಂದು ಬೆಳೆಯುವುದು ರೂಢಿ. ಈ ಮೂರು ಬೆಳೆಗಳಿಂದ ಪ್ರತಿ ವರ್ಷ ₹10 ಲಕ್ಷ ಲಾಭವಾಗುತ್ತಿದೆ’ ಎಂದರು,

ಕೊಳವೆಬಾವಿ ಜಮೀನಿನಲ್ಲಿದೆ. ರಸಾಯನಿಕ ಗೊಬ್ಬರ ಬಳಸುತ್ತಾರೆ. ಗದಗ, ಬೆಳಗಾವಿ, ಮುಂಬೈ, ಹುಬ್ಬಳ್ಳಿ, ಧಾರವಾಡ ನಗರಗಳಿಗೆ ಹೂವನ್ನು ರಪ್ತು ಮಾಡುತ್ತಾರೆ. ಅಲ್ಲದೆ ರಥೋತ್ಸವಗಳಿಗೆ ದೊಡ್ಡದಾದ ಹಾರಗಳನ್ನು ಪೂರೈಸುತ್ತಾರೆ.

ಸಿದ್ದಪ್ಪ ಜಮಖಂಡಿ ಅವರ ದೂ: 97419 76639.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.