ಹುನಗುಂದ: ಕೆಲವು ದಿನಗಳಿಂದ ನಾಗಾಲೋಟದಲ್ಲಿ ಮುಂದುವರಿದಿದ್ದ ಟೊಮೆಟೊ ದರ ಇಳಿಯುತ್ತಿದ್ದು, ಶನಿವಾರ ಪಟ್ಟಣದ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 30ಕ್ಕೆ ಮಾರಾಟವಾಗಿದೆ.
ವಾರದ ಹಿಂದೆ ₹ 100 ಗಡಿ ದಾಟಿದ್ದ ಟೊಮೆಟೊ ದರ ಈಗ ಕಡಿಮೆಯಾಗಿದೆ. 15 ದಿನಗಳ ಹಿಂದೆ ಒಂದು ಬಾಕ್ಸ್ ಟೊಮೆಟೊ (15-20 ಕೆ.ಜಿ) ₹ 2,400 ದರದಲ್ಲಿ ಮಾರಾಟವಾಗಿ ಖರೀದಿದಾರರನ್ನು ಹುಬ್ಬೇರಿಸುವಂತೆ ಮಾಡಿತ್ತು.
ಆದರೆ ಇಂದು ಪಟ್ಟಣದ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಕೇವಲ ₹ 400 ರ ಆಸುಪಾಸಿನಲ್ಲಿ ಮಾರಾಟವಾಗಿದೆ. ಪ್ರತಿ ಶನಿವಾರ ಪಟ್ಟಣದಲ್ಲಿ ತರಕಾರಿ ಸಂತೆ ನಡೆಯುವುದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಕಾಯಿಪಲ್ಲೆ ಖರೀದಿಗೆ ಬರುತ್ತಾರೆ.
ಕೆಲವು ದಿನಗಳಿಂದ ನಿರಂತರವಾಗಿ ದರ ಹೆಚ್ಚಾಗಿದ್ದರಿಂದ ಟೊಮೆಟೊ ಗ್ರಾಹಕರ ಜೇಬಿಗೆ ಕತ್ತರಿ ಹಾಕಿತ್ತು. ಹೀಗಾಗಿ ಬಹುತೇಕ ಗ್ರಾಹಕರು ಟೊಮೆಟೊ ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಆದರೆ ಇಂದು ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಿದ್ದರಿಂದ ಹೆಚ್ಚಿನ ಪ್ರಮಾಣದ ಗ್ರಾಹಕರು ಖರೀದಿಗೆ ಮುಂದಾದರು.
ನಿರಂತರವಾಗಿ ಟೊಮೆಟೊ ಬೆಲೆ ಹೆಚ್ಚಾಗುತ್ತಿರುವುದನ್ನು ಮನಗಂಡು ನೀರಾವರಿ ಪ್ರದೇಶ ಹೊಂದಿರುವ ತಾಲ್ಲೂಕಿನ ಕೆಲವು ರೈತರು ಟೊಮೆಟೊ ಬೀಜ ಖರೀದಿಸಿ ಬಿತ್ತನೆ ಮಾಡಿದರೆ ಇನ್ನೂ ಕೆಲವು ರೈತರು ನರ್ಸರಿಗಳಲ್ಲಿ ಟೊಮೆಟೊ ಸಸಿಗಳನ್ನು ಖರೀದಿಸಿ ನೆಟ್ಟಿದ್ದಾರೆ.
ಒಂದು ತಿಂಗಳಿಂದ ಟೊಮೆಟೊ ದರ ಹೆಚ್ಚಿದ್ದರಿಂದ ಖರೀದಿಗೆ ಗ್ರಾಹಕರು ಆಸಕ್ತಿ ತೋರುತ್ತಿರಲಿಲ್ಲ. ಹೆಚ್ಚಿನ ಬೆಲೆ ನೀಡಿ ಟೊಮೆಟೊ ಖರೀದಿ ಮಾಡಿ ಮಾರಾಟವಾಗದಿದ್ದರೆ ನಷ್ಟ ಅನುಭವಿಸಬೇಕಾಗಿತ್ತು. ಈಗ ಅಂತಹ ಸಮಸ್ಯೆ ಇಲ್ಲಆಸಿಫ್ ಭಾಗವಾನ, ವ್ಯಾಪಾರಿ ಹುನಗುಂದ
ಟೊಮೆಟೊ ಬೆಲೆ ಏರಿಕೆಯಿಂದ ಹೊರೆಯಾಗಿತ್ತು. ಕಾಯಿಪಲ್ಯಗಳ ದರ ಸ್ಥಿರತೆಯಿಂದ ಕೂಡಿರಬೇಕು-ನಿರ್ಮಲಾ ಗ್ರಾಹಕಿ ಹುನಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.