ADVERTISEMENT

ಹುನಗುಂದ | ದಟ್ಟ ಮಂಜು: ತೊಗರಿ ಇಳುವರಿ ಕುಂಠಿತ ಭೀತಿ

ಹುನಗುಂದ, ಇಳಕಲ್ ತಾಲ್ಲೂಕಿನ 34.321 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ

ಸಂಗಮೇಶ ಹೂಗಾರ
Published 9 ನವೆಂಬರ್ 2024, 5:10 IST
Last Updated 9 ನವೆಂಬರ್ 2024, 5:10 IST
ಹುನಗುಂದ ತಾಲ್ಲೂಕಿನಲ್ಲಿ ಬೆಳೆದ ತೊಗರಿ ಗಿಡದಲ್ಲಿ ಉತ್ತಮ ಹೂವು ಬಿಟ್ಟಿದ್ದು, ಮಂಜಿನಿಂದಾಗಿ ಬಹುತೇಕ ಹೂವು ಉದುರಿವೆ 
ಹುನಗುಂದ ತಾಲ್ಲೂಕಿನಲ್ಲಿ ಬೆಳೆದ ತೊಗರಿ ಗಿಡದಲ್ಲಿ ಉತ್ತಮ ಹೂವು ಬಿಟ್ಟಿದ್ದು, ಮಂಜಿನಿಂದಾಗಿ ಬಹುತೇಕ ಹೂವು ಉದುರಿವೆ    

ಹುನಗುಂದ: ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ವಾರದ ಹಿಂದೆ ದಟ್ಟವಾದ ಮಂಜು ಅವರಿಸಿದ್ದರಿಂದ ತೊಗರಿ ಬೆಳೆ ಇಳುವರಿ ಕುಂಠಿತಗೊಳ್ಳುವ ಭೀತಿ ರೈತರಿಗೆ ಎದುರಾಗಿದೆ.

ಈ ಬಾರಿ ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ಒಟ್ಟು 34.321ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಈ ಎರಡು ತಾಲ್ಲೂಕುಗಳಲ್ಲಿ ಉತ್ತಮ ಮಳೆ ಆಗಿದ್ದರಿಂದ ತೊಗರಿ ಬೆಳೆ ಅಳೆತ್ತರಕ್ಕೆ ಸಮೃದ್ಧವಾಗಿ ಬೆಳೆದಿತ್ತು. ಆದರೆ ಗಿಡದಲ್ಲಿ ಮೊಗ್ಗು, ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿ ಬೆಳೆಗೆ ಒಂದೇ ವಾರದಲ್ಲಿ ಎರಡು- ಮೂರು ದಿನಗಳ ಕಾಲ ದಟ್ಟವಾದ ಮಂಜು ಆವರಿಸಿದ ಪರಿಣಾಮ ಗಿಡದಲ್ಲಿನ ಅಪಾರ ಪ್ರಮಾಣದ ಮೊಗ್ಗು ಮತ್ತು ಹೂವು ಉದುರಿದ್ದು ರೈತರನ್ನು ಚಿಂತೆಗಿಡು ಮಾಡಿದೆ.

ಸಾಲ ಮಾಡಿ ಬೆಳೆಗೆ ಖರ್ಚು ಮಾಡಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತ ವರ್ಗಕ್ಕೆ ಮಂಜು ಮಾರಕವಾಗಿ ಪರಿಣಮಿಸಿದೆ. ಕಳೆದ ವರ್ಷ ಬರಗಾಲದ ಜೊತೆಗೆ ತೊಗರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿತ್ತು. ಅದರಿಂದ ಆಕರ್ಷಿಸಿತರಾಗಿ ಈ ವರ್ಷವು ಉತ್ತಮ ಬೆಲೆ ದೊರೆಯಬಹುದು ಎಂಬ ಅಂದಾಜಿನಲ್ಲಿ ಎರಡು ತಾಲ್ಲೂಕುಗಳ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಉತ್ತಮ ಮಳೆಗೆ ನಂತರ ಕೆಲ ದಿನಗಳ ಕಾಲ ವಿಪರೀತ ಬಿಸಿಲು ಇವುಗಳ ನಡುವೆ ತೊಗರಿ ಬೆಳೆ ಸಮೃದ್ಧವಾಗಿ ಬೆಳೆದಿತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಗಿಡದಲ್ಲಿ ಹೂವು ಕಾಯಿಗಳು ಕಟ್ಟಿಲ್ಲ.

ADVERTISEMENT

ಬೆಳೆಗೆ ರೋಗಬಾಧೆ: ಈ ಎರಡು ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದ ತೊಗರಿ ಬೆಳೆ ರೋಗಬಾಧೆಗೆ ತುತ್ತಾಗಿ ಗಿಡದಲ್ಲಿ ಹೆಚ್ಚೆಂದರೆ ಗಿಡದ ತುದಿಯಲ್ಲಿ ನಾಲ್ಕಾರು ಕಾಯಿಗಳನ್ನು ಕಾಣಬಹುದಾಗಿದೆ. ಇಂತಹ ಸಮಯದಲ್ಲಿ ರೈತರು ಉತ್ತಮ ಇಳುವರಿ ನಿರೀಕ್ಷೆ ಸಾಧ್ಯವಿಲ್ಲದಂತಾಗಿದೆ.
ಮಳೆ ಆಶ್ರಿತ ಪ್ರದೇಶದಲ್ಲಿ ಉತ್ತಮ ಇಳುವರಿ ಬರಬಹುದು ಎಂಬ ನಿರೀಕ್ಷೆಯಲ್ಲಿ ರಾಷ್ಟ್ರೀಯ ಬೀಜ ನಿಗಮವು (ಎನ್. ಎಸ್. ಸಿ ) ಕೃಷಿ ಇಲಾಖೆಗೆ ಪೂರೈಸಿದ ಜಿ ಆರ್ ಜಿ 152 ಎಂಬ ಹೊಸ ತಳಿ ತೊಗರಿ ಬೀಜವನ್ನು ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಗಿಡ ಆಳೆತ್ತರಕ್ಕೆ ಬೆಳೆದರೂ ಕೆಲ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಹೂವು ಮತ್ತು ಕಾಯಿಗಳು ಕಂಡು ಬರುತ್ತಿದೆ. ಹೀಗಾಗಿ ರೈತರು ಆತಂಕ ಪಡುವಂತಾಗಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ಇನ್ನು ಸ್ವಲ್ಪ ದಿನ ತಡೆಯಿರಿ ಹೂವು ಮತ್ತು ಕಾಯಿ ಚೆನ್ನಾಗಿ ಬಿಡುತ್ತದೆ ಎಂದು ಹೇಳುತ್ತಾರೆ. ಈಗಾಗಲೇ ಹೂವು ಮತ್ತು ಕಾಯಿ ಕಟ್ಟುವ ಅವಧಿ ಬಹುತೇಕ ಮುಗಿದಿದ್ದು, ಏನು ಮಾಡಬೇಕು ಎಂದು ತಿಳಿಯದಾಗಿದೆ ಎಂದು ಕೆಲ ರೈತರು ಅಳಲು ವ್ಯಕ್ತಪಡಿಸಿದರು.

ನಾಲ್ಕು ಎಕರೆಯಲ್ಲಿ ಜಿಆರ್‌ಜಿ 152 ತಳಿ ತೊಗರಿ ಬಿತ್ತನೆ ಮಾಡಿದ್ದು, ಗಿಡದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹೂವು ಮತ್ತು ಕಾಯಿಗಳು ಕಂಡು ಬರುತ್ತಿಲ್ಲ. ಈ ತಳಿ ಬೀಜ ಬಿತ್ತನೆ ಮಾಡಿದ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಚಿತ್ತಾವಾಡಗಿ ಗ್ರಾಮದ ರೈತ ವೀರನಗೌಡ ಮೇಟಿ ಒತ್ತಾಯಿಸಿದರು.

ಬೆಳೆಗೆ ವಿಮೆ ಮಾಡಿಸಿದ ರೈತರು ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ಹುನಗುಂದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಂಟರಠಾಣ ತಿಳಿಸಿದ್ದಾರೆ.

ಹುನಗುಂದ ತಾಲ್ಲೂಕಿನಲ್ಲಿ ಬೆಳೆದ ತೊಗರಿ ಗಿಡದಲ್ಲಿ ಉತ್ತಮ ಹೂವು ಬಿಟ್ಟಿದ್ದು ಮಂಜಿನಿಂದಾಗಿ ಬಹುತೇಕ ಹೂವು ಉದುರಿವೆ 
ಹುನಗುಂದ ಪಟ್ಟಣದ ಹೊರವಲಯದಲ್ಲಿ ವಾರದ ಹಿಂದೆ ದಟ್ಟವಾದ ಹೊಗೆ ಮಂಜು ಅವರಿಸಿರುವುದು
ಭೂಮಿಯಲ್ಲಿನ ತೇವಾಂಶ ಹೆಚ್ಚು ಕಡಿಮೆ ಆದಾಗ ಮೋಡ ಕವಿದ ವಾತಾವರಣ ಹಾಗೂ ಮಂಜಿನಿಂದ ತೊಗರಿ ಹೂವು ಮತ್ತು ಮೊಗ್ಗುಗಳು ಉದುರಿವೆ.
-ಸೋಮಲಿಂಗಪ್ಪ ಅಂಟರಠಾಣ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.