ADVERTISEMENT

ಬಾಗಲಕೋಟೆ | 'ಟ್ರ್ಯಾಕ್ಟರ್‌ ಹಾಡಿನ ಸಾಹಿತ್ಯಕ್ಕೆ ಕಡಿವಾಣ ಹಾಕಲಿ'

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:08 IST
Last Updated 29 ಜೂನ್ 2024, 16:08 IST
ಬಾಗಲಕೋಟೆಯಲ್ಲಿ ಶನಿವಾರ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳು
ಬಾಗಲಕೋಟೆಯಲ್ಲಿ ಶನಿವಾರ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳು   

ಬಾಗಲಕೋಟೆ: ಓದು ಕಲಿಯದ ಜನಪದ ಸಾಹಿತಿಗಳು ರಚಿಸಿದ ಸಾಹಿತ್ಯವನ್ನು ಅಧ್ಯಯನ ಮಾಡಲು ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಇದು ಜನಪದ ಸಾಹಿತ್ಯದ ಶಕ್ತಿ ಎಂದು ಸಾಹಿತಿ ವೈ.ವೈ. ಕೊಕ್ಕನವರ ಹೇಳಿದರು.

ಶನಿವಾರ ಸಮ್ಮೇಳನದಲ್ಲಿ ‘ಜನಪದ ಅಂದು–ಇಂದು’ ಕುರಿತ ವಿಶೇಷ ಉಪನ್ಯಾಸ ನೀಡಿದ ಅವರು, ಟ್ರ್ಯಾಕ್ಟರ್‌ಗಳಲ್ಲಿ ಹಾಕುತ್ತಿರುವ ಹಾಡಿನಿಂದ ಜನಪದ ಸಾಹಿತ್ಯ, ಸಂಸ್ಕೃತಿ ಹಾಳಾಗುತ್ತಿದೆ. ಅವುಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ ಎಂದರು.

ಸಾಹಿತ್ಯದ ಮೂಲ ಉದ್ದೇಶವೇ ಕೆಟ್ಟದ್ದು ಹೋಗಿ, ಒಳ್ಳೆಯದಾಗಿ ಬದಲಾಗಬೇಕು ಎಂಬುದಾಗಿದೆ. ಜನಪದ ಸಾಹಿತ್ಯ ನೇರವಾಗಿ ಹೇಳುವ ಕೆಲಸ ಮಾಡಿದೆ. ಶ್ರಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮೊಬೈಲ್‌ ದಾಸರಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಜನರ ಜೀವನ, ನಡೆ, ನುಡಿ, ಸಂಸ್ಕೃತಿಯನ್ನು ಕಟ್ಟಿಕೊಡುವ ಕೆಲಸವನ್ನು ಜನಪದ ಸಾಹಿತ್ಯ ಮೌಖಿಕ ಸಾಹಿತ್ಯದ ಮೂಲಕ ಜನಪದರು ಮಾಡಿಕೊಂಡು ಬಂದಿದ್ದಾರೆ. ಸಾಹಿತ್ಯದ ಬೇರುಗಳು ಜನಪದದಲ್ಲಿವೆ ಎಂದರು.

ಅತಿಥಿಗಳಾಗಿದ್ದ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಡಿ. ಬಾಬು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ದು ದಿವಾನ ಮಾತನಾಡಿ, ‘ಜನಪದ ಎಂದಿಗೂ ಅಳಿಯುವುದಿಲ್ಲ. ರೂಪ ಬದಲಿಸಿಕೊಂಡು ಸದಾ ಜತೆಗಿರುತ್ತದೆ’ ಎಂದು ಹೇಳಿದರು.

ಮನುಷ್ಯನ ಜೀವನದಲ್ಲಿ ಎಲ್ಲ ಮಗ್ಗಲುಗಳನ್ನು ಪರಿಚಯಿಸುವ ಕೆಲಸವನ್ನು ಜನಪದ ಮಾಡಿದೆ. ಇಂದಿನ ಮಕ್ಕಳು ಜನಪದ ಕೇಳಿದರೆ ಸಾಕು ನಮ್ಮ ಸಂಸ್ಕೃತಿಯ ವೈಭವ ಗೊತ್ತಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.