ADVERTISEMENT

ಔಷಧ ಸಿಂಪಡಣೆಗೆ ಟ್ರ್ಯಾಕ್ಟರ್, ಡ್ರೋನ್!

ಯಂತ್ರೋಪಕರಣ ಮೊರೆ ಹೋದ ರೈತ: ಸಮಯ ಉಳಿತಾಯ

ಸಂಗಮೇಶ ಹೂಗಾರ
Published 26 ಅಕ್ಟೋಬರ್ 2024, 6:14 IST
Last Updated 26 ಅಕ್ಟೋಬರ್ 2024, 6:14 IST
ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ರೈತರೊಬ್ಬರು ಹೊಲದಲ್ಲಿನ ತೊಗರಿ ಬೆಳೆಗೆ ಟ್ರ್ಯಾಕ್ಟರ್ ಮೂಲಕ ಔಷಧ ಸಿಂಪಡಣೆ ಮಾಡಿದರು
ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ರೈತರೊಬ್ಬರು ಹೊಲದಲ್ಲಿನ ತೊಗರಿ ಬೆಳೆಗೆ ಟ್ರ್ಯಾಕ್ಟರ್ ಮೂಲಕ ಔಷಧ ಸಿಂಪಡಣೆ ಮಾಡಿದರು   

ಹುನಗುಂದ: ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ತೊಗರಿ ಬೆಳೆಗೆ ಔಷಧ ಸಿಂಪಡಣೆ ಕಾರ್ಯ ಜೋರಾಗಿದೆ. ಈ ಕಾರ್ಯಕ್ಕೆ ಯಂತ್ರೋಪಕರಣಗಳ ಮೊರೆ ಹೋಗಿರುವುದು ಈ ಬಾರಿಯ ವಿಶೇಷ.

ಈ ಎರಡೂ ತಾಲ್ಲೂಕು ಸೇರಿ ಒಟ್ಟು 34,321 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ನಿರೀಕ್ಷೆಗೂ ಮೀರಿ ಮಳೆ ಆಗಿದ್ದರಿಂದ ತೊಗರಿ ಬೆಳೆ ಎತ್ತರವಾಗಿ ಬೆಳೆದಿದೆ. ಬಹುತೇಕ ತೊಗರಿ ಬೆಳೆ ಹೂವು ಮತ್ತು ಕಾಯಿ ಕಟ್ಟುವ ಹಂತಕ್ಕೆ ಬಂದಿದೆ. ಈ ಸಮಯದಲ್ಲಿ ಕೀಟಗಳ ಹಾವಳಿ ಹೆಚ್ಚು. ಹೀಗಾಗಿ ಔಷಧ ಸಿಂಪಡಣೆ ಅತ್ಯವಶ್ಯ.

ಈ ಮೊದಲು ಔಷಧ ಸಿಂಪಡಣೆಗೆ ಕಾರ್ಮಿಕರನ್ನು ಅವಲಂಬಿಸಲಾಗುತ್ತಿತ್ತು. ಆದರೆ ಬಾರಿ ಬೆಳೆ ಎತ್ತರವಾಗಿ ಬೆಳೆದ ಪರಿಣಾಮ ಕಾರ್ಮಿಕರಿಂದ ಔಷಧ ಸಿಂಪಡಣೆ ಮಾಡುವುದು ಕಷ್ಟ. ಹೀಗಾಗಿ ರೈತರು ಪರ್ಯಾಯ ಮಾರ್ಗದ ಮೊರೆ ಹೋಗಿದ್ದಾರೆ.

ADVERTISEMENT

ಯಂತ್ರೋಪಕರಣ ಬಳಕೆ: ಈ ಬಾರಿ ತೊಗರಿ ಬಿತ್ತನೆ ಕ್ಷೇತ್ರ ಹೆಚ್ಚಾಗಿರುವ ಜೊತೆಗೆ ಬೆಳೆ ಎತ್ತರವಿರುವುದರಿಂದ ಹೊಲಗಳಲ್ಲಿ ಕೆಲಸ ಕಾರ್ಯಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಯಂತ್ರೋಪಕರಣಗಳ ಬಳಕೆ ಮೂಲಕ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ. ಕಾರ್ಮಿಕರ ಬದಲಿಯಾಗಿ ಟ್ರ್ಯಾಕ್ಟರ್, ಡ್ರೋನ್, ಎತ್ತಿನ ಬಂಡಿಗೆ ಔಷಧ ಸಿಂಪಡಣೆ ಯಂತ್ರಗಳನ್ನು ಅಳವಡಿಸಿರುವುದರಿಂದ ಒಂದೇ ಬಾರಿಗೆ ಹತ್ತಾರು ಸಾಲುಗಳಿಗೆ ಔಷಧ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿದೆ. ಮೊದಲಿಗಿಂತಲೂ ಕೆಲಸ ಸರಳ ಆಗಿದೆ.

ಸಮಯ ಉಳಿತಾಯ: ಔಷಧ ಸಿಂಪಡಣೆಗೆ ಯಂತ್ರೋಪಕರಣಗಳನ್ನು ಬಳಕೆ ಮಾಡುವುದರಿಂದ ಸಮಯ ಉಳಿತಾಯ ಆಗುತ್ತಿದೆ. ಮೊದಲು ಕಾರ್ಮಿಕರನ್ನು ಅವಲಂಬಿಸಿ ಔಷಧ ಸಿಂಪಡಣೆ ಮಾಡಬೇಕಿತ್ತು. ಆಗ ಔಷಧ ಸಿಂಪಡನೆಗೆ ಹೆಚ್ಚಿನ ಸಮಯದ ಜೊತೆಗೆ ಹೆಚ್ಚಿನ ಕಾರ್ಮಿಕರ ಅವಶ್ಯಕತೆ ಇತ್ತು. ಕಾರ್ಮಿಕರಿಗಾಗಿ ಪರದಾಡುವಂತಾಗಿತ್ತು. ಈಗ ಯಂತ್ರೋಪಕರಣಗಳು ಆ ಕೊರತೆಯನ್ನು ನೀಗಿಸಿದ್ದು, ಹೆಚ್ಚು ಪರಿಣಾಮಕಾರಿ ಆಗಿದೆ.

ನಕಲಿ ಔಷಧ: ‘ಕೀಟನಾಶಕ ಔಷಧ ಮಾರಾಟ ಮಾಡುವ ಕೆಲವರು ನಕಲಿ ಔಷಧಗಳ ಜೊತೆಗೆ ನಿಷೇಧಿತ ಔಷಧಿಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ’ ಎಂಬ ಆರೋಪ ಕೇಳಿ ಬಂದಿವೆ.

ಎತ್ತರವಾಗಿ ಬೆಳೆದತೊಗರಿ ಪೈರು ಹೂವು, ಕಾಯಿ ಕಟ್ಟುವ ಹಂತದಲ್ಲಿ ಕೀಟ ಬಾಧೆ ಹೆಚ್ಚು ಕಾರ್ಮಿಕರ ಕೊರತೆ ನೀಗಿಸಿದ ಯಂತ್ರೋಪಕರಣ

ಸರ್ಕಾರ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಔಷಧ ಸಿಂಪಡಣೆ ಯಂತ್ರೋಪಕರಣಗಳನ್ನು ಒದಗಿಸಬೇಕು
-ಬಸವರಾಜ ರೈತ ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.