ಕುಳಗೇರಿ ಕ್ರಾಸ್: ಸಮೀಪದ ಎಂ.ಆರ್.ಎನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳಿಂದಾಗಿ ಕುಳಗೇರಿ ಕ್ರಾಸ್‌ನಲ್ಲಿ ರಾತ್ರಿ ವೇಳೆ ಸಂಚಾರ ದಟ್ಟಣೆ ಸಮಸ್ಯೆ ಆಗುತ್ತಿದೆ. ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಟ್ರ್ಯಾಕ್ಟರ್‌ಗಳು ಹೆದ್ದಾರಿಯಲ್ಲಿ ಕೂಡಿದರೆ ಇನ್ನುಳಿದ ವಾಹನಗಳು ಮುಂದೆ ಹೋಗುವುದಕ್ಕೆ ಹರಸಾಹಸ ಪಡುವ ಪರಿಸ್ಥಿತಿ ಇದೆ.
ಕುಳಗೇರಿ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ–218 ಮತ್ತು ರಾಜ್ಯ ಹೆದ್ದಾರಿ–14 ಸೇರುತ್ತವೆ. ಸಾಮಾನ್ಯವಾಗಿ ವಾಹನಗಳು ವಿಪರೀತವಾಗಿರುತ್ತವೆ. ಇವುಗಳ ನಡುವೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಮತ್ತು ಲಾರಿಗಳು ನುಗ್ಗಿದರೆ ದಟ್ಟಣೆ ಸಮಸ್ಯೆ ಶುರುವಾಗುತ್ತದೆ. ಹುಬ್ಬಳ್ಳಿಯಿಂದ ವಿಜಯಪುರದತ್ತ ಮತ್ತು ವಿಜಯಪುರದಿಂದ ಹುಬ್ಬಳ್ಳಿಯತ್ತ ವಾಹನಗಳೆಲ್ಲವೂ ದಾರಿಗಾಗಿ ಕಾಯುತ್ತಾ ನಿಲ್ಲಬೇಕಾಗುತ್ತಿದೆ.
ಇದೀಗ ಕಬ್ಬು ಕಟಾವು ಹಂಗಾಮು ಶುರುವಾಗಿರುವುದರಿಂದ ಪೊಲೀಸರು ಸಂಚಾರ ವ್ಯವಸ್ಥೆ ಸುಗಮ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.
ಕುಳಗೇರಿ ಕ್ರಾಸ್ ಸಂಗೋಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಸಾಗಿಸುವ ವಾಹನಗಳು ತಿರುವು ತೆಗೆದುಕೊಳ್ಳುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಕಬ್ಬು ಭರ್ತಿ ಮಾಡಿದ ಎರಡು ಟ್ರ್ಯಾಕ್ಟರ್ ಟ್ರಾಲಿಗಳನ್ನು ಸಂಚಾರ ದಟ್ಟಣೆಯಿಂದ ಹೊರ ತರುವುದು ಕೂಡಾ ಚಾಲಕರಿಗೆ ಸಾಹಸಮಯ. ದೂರ ಊರಿಗೆ ಸಂಚರಿಸಬೇಕಾದ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿ ವಾಹನಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ.
ಪ್ರತಿ ಸೋಮವಾರ ಕುಳಗೇರಿ ಕ್ರಾಸ್‌ನಲ್ಲಿ ಸಂತೆ ನೆರೆಯುತ್ತದೆ. ಇದಕ್ಕಾಗಿ ಸಾಕಷ್ಟು ವಾಹನಗಳು ಸೇರ್ಪಡೆ ಆಗುತ್ತವೆ. ವಾಹನಗಳು ಮುಂದೆ ಸಾಗದೆ ಹೆದ್ದಾರಿಗಳ ಸಂಚಾರ ಸ್ಥಗಿತವಾಗುತ್ತದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸುವುದಕ್ಕೆ ಸುಮಾರು ಎರಡು ತಾಸು ಸಮಯವಾಗುತ್ತದೆ. ಪ್ರತಿ ಸೋಮವಾರ ಸಮಸ್ಯೆ ವಿಕೋಪಕ್ಕೆ ಹೋಗುತ್ತಿದೆ.
‘ಕುಳಗೇರಿ ಪೊಲೀಸ್ ಹೊರ ಠಾಣೆಯನ್ನು ಮೇಲ್ದೆರ್ಜೆಗೆ ಏರಿಸುವುದರಿಂದ ಹೆಚ್ಚಿನ ಸಿಬ್ಬಂಂದಿ ಬರುತ್ತಾರೆ. ಇದರಿಂದ ಸಂಚಾರ ಸಮಸ್ಯೆ ಮತ್ತು ಈ ಭಾಗದ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಅನುಕೂಲವಾಗುತ್ತದೆ’ ಎಂದು ಪಿಕೆಪಿಎಸ್ ನಿರ್ದೆಶಕ ಶಿವಾನಂದ ಚೋಳನ್ನವರ ತಿಳಿಸಿದರು.
ಕುಳಗೇರಿ ಕ್ರಾಸ್ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಭಾರಿ ಪ್ರಮಾಣದಲ್ಲಿ ಸಂಚಾರ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿ ಪರಿಹಾರ ಕಂಡುಕೊಳ್ಳುತ್ತೇವೆ.-ವಿಠ್ಠಲ ನಾಯಕ್, ಬಾದಾಮಿ ಪೊಲೀಸ್ ಠಾಣೆ ಪಿಎಸ್ಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.