ಅಮೀನಗಡ (ಬಾಗಲಕೋಟೆ): ಸಮೀಪದ ರಕ್ಕಸಗಿ ಗ್ರಾಮದ ಬಳಿ ಬಾಗಲಕೋಟೆ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಕಾರು ಹಾಗೂ ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಾರಲದಿನ್ನಿ ತಾಂಡಾದ ಸೀತಮ್ಮ ರಾಮಪ್ಪ ರಾಠೋಡ (60), ಗಿರಿಯಮ್ಮ ರಾಠೋಡ (55), ರೇಣುಕಾ (40) ಮೃತಪಟ್ಟವರು. ನಾಲ್ಕು ಜನರಿಗೆ ತೀವ್ರವಾಗಿ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣ–ಪುಟ್ಟ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವವರನ್ನು ಬಾಗಲಕೋಟೆ ಹಾಗೂ ಸಣ್ಣ ಪ್ರಮಾಣದಲ್ಲಿ ಗಾಯಗೊಂಡವರನ್ನು ಹುನಗುಂದ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮಾರಲದಿನ್ನಿ ತಾಂಡಾದಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಟಾಟಾ ಏಸ್ ವಾಹನಕ್ಕೆ, ಮುಧೋಳದಿಂದ ಹೊಸಪೇಟೆಗೆ ಹೊರಟಿದ್ದ ಕಾರು ಡಿಕ್ಕಿಯಾಗಿವೆ. ಕಾರು ಚಾಲಕನಿಗೂ ಸಣ್ಣ ಗಾಯಗಳಾಗಿವೆ.
ಮಾರಲದಿನ್ನಿ ತಾಂಡಾದ 18ಕ್ಕೂ ಹೆಚ್ಚು ಜನರು ಟಾಟಾ ಏಸ್‌ನಲ್ಲಿ ಶಿರೂರಿನ ನೀಲಾನಗರ ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಎಸ್ಪಿ ಅಮರನಾಥ ರೆಡ್ಡಿ, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಸುನೀಲ ಸವದಿ, ಅಮೀನಗಡ ಪಿಎಸ್ಐ ಶಿವಾನಂದ ಸಿಂಗನ್ನವರ ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.